ಟಿವಿ9 ಮಿತ್ರ ರವೀಂದ್ರನ ನೆನಪಿನಲ್ಲಿ…

ಆ ಶಾಕ್ ನಿಂದ ಟಿವಿ9 ಮಿತ್ರರು ಇನ್ನೂ ಹೊರ ಬಂದಿಲ್ಲ.
ಪ್ರೊಡಕ್ಷನ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ರವೀಂದ್ರ ಇನ್ನಿಲ್ಲ ಎಂಬ ಸತ್ಯವನ್ನು ಒಪ್ಪಲು ಎಲ್ಲರ ಮಸ್ಸುಗಳೂ ನಿರಾಕರಿಸುತ್ತಿವೆ.
ಆವತ್ತು ಜೂನ್ 17.
ಬೆಳಿಗ್ಗೆ 11.05 ಕ್ಕೆ ಪ್ರೊಡಕ್ಷನ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ರವೀಂದ್ರ ಮೂಲಿಮನೆ ಎಂದಿನಂತೆ ಆಫೀಸಿಗೆ ಬಂದಿದ್ದಾನೆ. ಮೂರನೇ ಮಹಡಿಯಲ್ಲಿರುವ ಟಿವಿ9 ಕ್ಯಾಂಟೀನ್ ನಲ್ಲಿ ಗ್ರಾಫಿಕ್ ವಿಭಾಗದ ಮುಖ್ಯಸ್ಥ ಸಿದ್ದೇಶ್ ಜೊತೆ ತಿಂಡಿ ತಿನ್ನುತ್ತಿದ್ದ. ಅದೇನಾಯ್ತೋ ಗೊತ್ತಿಲ್ಲ. ಸಿದ್ದೇಶ್ ಮೈಗೆ ತಾಗಿಕೊಂಡಂತೆ ರವಿಂದ್ರ ಧೀಡೀರನೆ ಕುಸಿದು ಬಿದ್ದಿದ್ದಾನೆ. ಆರಂಭದಲ್ಲಿ ಸಿದ್ದೇಶ್ ತಮಾಷೆಗೆ ಏನೋ ಮಾಡ್ತಿದ್ದಾನೆ ಎಂದುಕೊಂಡರೂ, ಒಂದೆರಡು ಸೆಕೆಂಡ್ ಗಳಲ್ಲೇ ಸತ್ಯದ ಅರಿವಾಗಿದೆ. ರವೀಂದ್ರ ಏನಾಯ್ತೋ ಎಂದು ಕೂಗಿದ್ದಾನೆ. ರವೀಂದ್ರ ಪೂತಿಱ ಕುಸಿದು ಕೆಳಗೆ ಬೀಳುವಷ್ಟರಲ್ಲಿ ಸಿದ್ದೇಶ್ ಮೊದಲನೆ ಮಹಡಿಗೆ ಜಿಗಿದು ಓಡಿ ಬಂದಿದ್ದ. ಏದುಸಿರು ಬಿಡುತ್ತಲೇ ಸೀನಿಯರ್ ಪ್ರೊಡ್ಯೂಸರ್ ರವಿ ಕುಮಾರ್ ಗೆ ರವೀಂದ್ರ ಕುಸಿದು ಬಿದ್ದ ಎಂದಿದ್ದಾನೆ. ಇದ್ದದ್ದೆಲ್ಲ ಬಿಟ್ಟು ಮೇಲೆ ಓಡುವಷ್ಟರಲ್ಲಿ, ಕೆಳಗೆ ಪ್ರಾಣೇಶ್ ರವೀಂದ್ರನನ್ನು ಹೊತ್ತುಕೊಂಡೇ ಬರುತ್ತಿದ್ದ. ಯಾರಿಗೂ ಏನಾಯ್ತು ಎಂದು ತಿಳಿಯುತ್ತಲೇ ಇರಲಿಲ್ಲ.
ತಕ್ಷಣ ಕಾರಿನಲ್ಲೇ ರವೀಂದ್ರನನ್ನು ಹಾಕಿಕೊಂಡು, ಒನ್ ವೇ-ಟುವೇ ಗಳನ್ನು ಲೆಕ್ಕಿಸದೆ ಕೇವಲ 3-4 ನಿಮಿಷದಲ್ಲಿ ಟಿವಿ9 ಕಚೇರಿಗೆ ಸಮೀಪದ ಆಸ್ಪತ್ರೆಗೆ ಸೇರಿಸಿದ್ದಾರೆ.
ಆದರೆ ಕಾಲ ಮಿಂಚಿತ್ತು.
ವೈದ್ಯರು ರವೀಂದ್ರ ತೀವ್ರ ಹೃದಯಾಘಾತದಿಂದ ಇನ್ನಿಲ್ಲ ಎಂದಾಗ ಅಲ್ಲಿ ಸೇರಿದ್ದ ಟಿವಿ9 ಎಲ್ಲಾ ಮಿತ್ರರಿಗೂ ತಲೆ ಸುತ್ತಿ ಬಂದ ಅನುಭವ.
ಮಿತ್ರ ರವೀಂದ್ರನ ನಿಜ ಜೀವನದ ಪ್ರೋಮೋ ಕಂಪ್ಲೀಟ್ ಆಗದೇ ಅಧಱಕ್ಕೆ ನಿಂತು ಹೋಗಿತ್ತು.
* * *
ಟಿವಿ9 ಆರಂಭದಿಂದಲೂ ಭ್ರಷ್ಟಾಚಾರದ ವಿರುದ್ಧದ ಹೋರಾಟದ ಒಂದು ಪ್ರೋಮೋ ಬರ್ತಿತ್ತು. ಅದರಲ್ಲೊಬ್ಬ ಹಣ್ಣು ಹಣ್ಣು ಮುದುಕ ಭ್ರಷ್ಟಾಚಾರದ ವಿರುದ್ದ ಟಿವಿ9 ಗೆ ಕರೆ ಮಾಡಿ, “ಹಲೋ ಟಿವಿ9′ ಎಂದು ಹೇಳುತ್ತಿದ್ದ. ಈ ಪ್ರೋಮೋ ಎಷ್ಟು ಕ್ಲಿಕ್ ಆಗಿತ್ತು ಎಂದರೆ ಅದಕ್ಕೆ ಬರುತ್ತಿದ್ದ ಪ್ರತಿಕ್ರಿಯೆಗಳ ಮಹಾಪೂರವೇ ಸಾಕ್ಷಿ.
ಟಿವಿ9 ಸೇರುವ ಮುನ್ನ, ಈ ಪ್ರೋಮೋ ನೋಡಿ ಸ್ವತ: ನಾನೂ ಸಹ ಇಷ್ಟಪಟ್ಟಿದ್ದೆ.
ಇತ್ತೀಚೆಗೆ ಅಷ್ಟೇ ಗಮನ ಸೆಳೆದ ಮತ್ತೊಂದು ಪ್ರೋಮೋ ಪುಟ್ಟ ಮಕ್ಕಳ ಶಾಲೆಗೆ ಹೋಗೊಣ ಬಾ ಗೆಳೆಯ. ಗ್ಯಾರೇಜ್ ನಲ್ಲಿ ಕೆಲಸ ಮಾಡುತ್ತಿದ್ದ ಬಾಲ ಕಾಮಿಱಕನನ್ನು ಶಾಲೆಗೆ ಹೋಗುತ್ತಿದ್ದ ಇಬ್ಬರು ಪುಟ್ಟ ಮಕ್ಕಳು, ತಮ್ಮ ಜೊತೆ ಶಾಲೆಗೆ ಕರೆದುಕೊಂಡು ಹೋಗುವ ಪ್ರೋಮೋ ಜನ ಮನ್ನಣೆಗೆ ಪಾತ್ರವಾಗಿತ್ತು.
ಇಂತಹ ಪ್ರೋಮೋಗಳ ಹಿಂದೆ ರವೀಂದ್ರನ ಕೆಲಸದ ಕೈ ಚಳಕವಿತ್ತು. ಟಿವಿ9 ಅನೇಕ ಪ್ರೋಮೋಗಳಿಗೆ ರವೀಂದ್ರ ಜೀವ ತುಂಬುವ ಶಕ್ತಿಯಾಗಿದ್ದ. ಟಿವಿ9 ನಲ್ಲಿ ಹೊಸ ಪ್ರೋಮೋದ ಕಾನ್ಸೆಪ್ಟ್ ಸಿದ್ಧವಾದ ಕೂಡಲೇ ಅದನ್ನು ಅಂತಿಮ ಹಂತಕ್ಕೆ ತರುವವರೆಗಿನ ಜವಾಬ್ದಾರಿ ರವೀಂದ್ರನದ್ದೇ. ಹೀಗಾಗಿಯೇ ಟಿವಿ9 ಮುಖ್ಯಸ್ಥ ಮಹೇಂದ್ರ ಮಿಶ್ರಾ, ಸೀನಿಯರ್ ಪ್ರೊಡ್ಯೂಸರ್ ರವಿಕುಮಾರ್, ಇನ್ ಪುಟ್ ಮುಖ್ಯಸ್ಥ ಲೂಯಿಸ್, ಔಟ್ ಪುಟ್ ಮುಖ್ಯಸ್ಥ ಮಾರುತಿ ಇವರೆಲ್ಲ ರವೀಂದ್ರ ಇದ್ದಾನೆಂದು ನೆಮ್ಮದಿಯಾಗಿ ಇರುತ್ತಿದ್ದರು. ಅಷ್ಟು ರವೀಂದ್ರನ ಮೇಲೆ, ಆತನ ಕೆಲಸದ ಮೇಲೆ ವಿಶ್ವಾಸವಿತ್ತು.
ಅದಕ್ಕೆ ಕಾರಣವೂ ಇಲ್ಲದಿಲ್ಲ. ರವೀಂದ್ರನಿಗೆ ದೃಶ್ಯ ಮಾಧ್ಯಮಕ್ಕೆ ಬೇಕಾದ ಒಳ ನೋಟವಿತ್ತು. ಕಲರ್ ಕಾಂಬಿನೇಷನ್, ಸೂಪರ್ ಎನ್ನಿಸುವ ಡ್ರೆಸ್ ಸೆನ್ಸ್ ಹಾಗೂ ಅದ್ಭುತ ಎನ್ನಿಸುವ ಮ್ಯೂಸಿಕ್ ಸೆನ್ಸ್ ಇತ್ತು. ಪ್ರತಿ ಪ್ರೋಮೋದಲ್ಲೂ ಏನಾದರೂ ಹೊಸದಿರಬೇಕು. ವೆರೈಟಿ ಇರಬೇಕು ಎನ್ನುತ್ತಿದ್ದ. ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ಚಾನೆಲ್ ಗಳನ್ನು ಸೂಕ್ಷ್ಮವಾಗಿ ಗಮನಿಸಿ, ಅವರಿಗೆ ಸಮಾನದ, ಅನೇಕ ಸಲ ಅವರಿಗಿಂತ ಉತ್ತಮವಾದ ಪ್ರೋಮೋ ರೆಡಿ ಮಾಡುತ್ತಿದ್ದ.
ಈ ಕಾಂಬಿನೇಷನ್ ಜೊತೆ ಸೇರಿದರೆ ಎಂತಹ ಪರಿಣಾಮ ಬೀರಬಲ್ಲವು ಎಂಬುದಕ್ಕೆ ಟಿವಿ9 ನಲ್ಲಿ ಉತ್ತಮ ಸಮಾಜಕ್ಕಾಗಿ ಎಂಬ ಹೆಸರಿನಲ್ಲಿ ಬರುತ್ತಿದ್ದ, ವಿವಿಧ ಸಮಸ್ಯೆಗಳನ್ನು ಪ್ರತಿ ಬಿಂಬಿಸುತ್ತಿದ್ದಂತಹ ಪ್ರೋಮೋಗಳು ಹುಟ್ಟಿಸಿದ್ದ ಕ್ರೇಜೇ ಸಾಕ್ಷಿ. ಜನರು ಟಿವಿ9 ನಲ್ಲಿ ಬ್ರೇಕ್ ಬಂತು ಎಂದು ಚಾನೆಲ್ ಚೇಂಜ್ ಮಾಡುತ್ತಿರಲಿಲ್ಲ. ಬದಲಿಗೆ ಇದು ಯಾವ ಪ್ರೋಮೋ ಎಂದು ನೋಡಲು ಕೂರುತ್ತಿದ್ದರು. ಮತ್ತೆ ಮತ್ತೆ ನೋಡಿದ ಪ್ರೋಮೋವನ್ನೇ ನೋಡುತ್ತಿದ್ದರು.
ಕನ್ನಡದ ಚಾನೆಲ್ ಗಳಲ್ಲಿ ಪ್ರೋಮೊಗಳಿಗೂ ಒಂದೊಳ್ಳೆಯ ಪ್ರೋಗ್ರಾಂನಷ್ಟೆ ವ್ಯಾಲ್ಯೂ ತಂದುಕೊಟ್ಟದ್ದು ರವೀಂದ್ರ ಎಂದರೆ ಅತಿಶಯೋಕ್ತಿ ಆಗಲಾರದು. ಹೀಗೆ ಪ್ರೋಮೋಗಳಿಗೆ ರವೀಂದ್ರ ಜೀವ ತುಂಬುತ್ತಿದ್ದ. ಆದರೆ ಈಗ ಆ ಜೀವವೇ ಇಲ್ಲ.
* * *
ರವೀಂದ್ರ ಜೀವನ ಪ್ರೇಮಿ. ಕೆಲಸದೆಡೆ ಕಮಿಟ್ ಮೆಂಟ್ ಇತ್ತು. ತನ್ನ ಕೆಲಸವನ್ನು ಎಂಜಾಯ್ ಮಾಡ್ತಿದ್ದ. ಇದೆಂಥಹ ಕೆಲಸ ಮಾರಾಯ ಎಂದು ಎಂದೂ ಸಹ ಗೊಣಗಿದವನಲ್ಲ. ಬಟ್ಟೆ, ಶೂಸ್ ಗಳ ಬಗ್ಗೆ ಅದೇನೋ ಕ್ರೇಜ್! ಊಟ, ಅದರಲ್ಲೂ ಗೆಳೆಯರ ಮನೆಯೂಟ ಎಂದರೆ ಇನ್ನಿಲ್ಲದ ಪ್ರೀತಿ!
ಟಿವಿ9 ಗೆ ಮದ್ಯಾಹ್ನ, ಮೂರನೇ ಮಹಡಿಗೆ ಊಟದ ಸಮಯದಲ್ಲಿ ಭೇಟಿ ನೀಡಿದವರೆಲ್ಲ ಒಂದು ವಿಷಯ ಗಮನಿಸಿರುತ್ತಾರೆ. ಅಲ್ಲಿ ಪ್ರತಿ ಟೇಬಲ್ ನಿಂದಲೂ ನಗೆಯ ಅಲೆ ತೇಲಿ ಬರುತ್ತಿರುತ್ತದೆ. ಪ್ರತಿ ಟೇಬಲ್ ಮೇಲೂ 3-4 ಊಟದ ಬಾಕ್ಸ್ ಗಳಿರುತ್ತವೆ. ಆದರೆ ಊಟಕ್ಕೆ ಮಾತ್ರ 7-8 ಜನ ನೆರೆದಿರುತ್ತಾರೆ. ಬಹುತೇಕರು ತಮಗೊಬ್ಬರಿಗೆ ಮಾತ್ರ ಊಟ ಕಟ್ಟಿಸಿಕೊಂಡು ಬಂದಿರುವುದಿಲ್ಲ. 2-3 ಜನಕ್ಕೆ ಆಗುವಷ್ಟು ಕಟ್ಟಿಸಿಕೊಂಡು ಬಂದಿರುತ್ತಾರೆ. ರಂಗನಾಥ್, ರಾಧಿಕಾ, ರವಿಕುಮಾರ್, ನ್ಯಾನ್ಸಿ, ದೇಸಾಯಿ, ಲೂಯಿಸ್, ಮಾರುತಿ, ರಾಘು, ಸಿದ್ದೇಶ್, ಮಂಜುನಾಥ್, ವಿಲಾಸ್, ಸುನಿಲ್, ರಮೇಶ್ ಬಾಬು, ಹಮೀದ್, ರಹಮಾನ್, ಗೌರೀಶ್ ಹೀಗೆ ಒಂದು ದೊಡ್ಡ ಮಿತ್ರ ಮಂಡಳಿಯೇ ನೆರೆದಿರುತ್ತದೆ. ಈ ಮಿತ್ರ ಮಂಡಳಿಯ ಖಾಯಂ ಸದಸ್ಯ ರವೀಂದ್ರ.
ಈಗ ಮೂರನೇ ಮಹಡಿಗೆ ಹೋದರೆ ಎಲ್ಲವೂ ಯಾಂತ್ರಿಕವಾಗಿ ಸಾಗುತ್ತಿರುತ್ತದೆ. ಊಟ ಮಾಡುವ ಗೆಳೆಯರೂ ಇರುತ್ತಾರೆ. ಆದರೆ ರವೀಂದ್ರನಿಲ್ಲ. ಹೀಗಾಗಿ ಪ್ರತಿ ತುತ್ತು ಬಾಯಿಗೆ ಇಡುವಾಗಲಿ ಮಿತ್ರರ ಕಣ್ಣು ಮಂಜು ಮಂಜು.
* * *
ರವೀಂದ್ರನ ಅಂತ್ಯಕ್ರಿಯೆ ನಡೆದ ಮರುದಿನ ಕೆಲ ಪತ್ರಕತಱ ಮಿತ್ರರು ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದರು. ರವೀಂದ್ರನ ಕುಟುಂಬಕ್ಕೆ ಸಹಾಯ ಕೇಳಿದ್ದರು. ತಕ್ಷಣ ಅದೇ ದಿನ ನಡೆದ ಕ್ಯಾಬಿನೆಟ್ ನಲ್ಲಿ ನಿಧಾಱರ ತೆಗೆದುಕೊಂಡ ಸಿಎಂ 2 ಲಕ್ಷ ರೂ. ಪರಿಹಾರ ನೀಡಿಬಿಟ್ಟರು. ಅಷ್ಟೇ ಅಲ್ಲ, ರವೀಂದ್ರನ ಅಕಾಲಿಕ ಮರಣವನ್ನೇ ಆಧಾರವಾಗಿಟ್ಟುಕೊಂಡು, ಪತ್ರಕತಱರ ಕ್ಷೇಮಾಭಿವೃದ್ಧಿ ನಿಧಿ ಸ್ಥಾಪಿಸುವುದಾಗಿಯೂ, ಶೀಘ್ರವೇ ಅದರ ರೂಪು ರೇಷೆಗಳನ್ನು ನಿಧಱರಿಸುವುದಾಗಿಯೂ ತಿಳಿಸಿದರು. ರವೀಂದ್ರ ತನ್ನ ಸಾವಿನಲ್ಲೂ ಪತ್ರಕತಱರಿಗೆ ಅನುಕೂಲವಾಗುವ ಹೊಸ ಯೋಜನೆಗೆ ಪ್ರೇರಕನಾಗಿ ಹೋಗಿದ್ದಾನೆ. ಅಂತಿಮ ಪಯಣದಲ್ಲೂ ಸಮಾಜಕ್ಕೆ, ಒಂದು ಸಮುದಾಯಕ್ಕೆ ಉಪಯೋಗ ಮಾಡಿ ಹೋಗುವುದು ಎಂದರೆ ಇದೇನಾ?
* * *
ರವಿಂದ್ರ ಹುಟ್ಟಿದ್ದು ದಾರವಾಡ ಸಮೀಪದ ದಾಸನಕೊಪ್ಪದಲ್ಲಿ. ಓದಿದ್ದೆಲ್ಲ ಧಾರವಾಡದಲ್ಲಿ. ಅಣ್ಣ ರಾಜಣ್ಣ ಕೃಷಿಕ. ತಂದೆ ಚಂದ್ರಶೇಖರ್. ಬಡತನದೊಂದಿಗೇ ಬೆಳೆದು ಬಂದ ರವೀಂದ್ರ ಇ-ಟಿವಿಯಲ್ಲಿ 5 ವಷಱ, ನಂತರ ಟಿವಿ9 ಸೇರಿಕೊಂಡು ನಿಧಾನವಾಗಿ ನೆಲೆ ಕಂಡುಕೊಳ್ಳುತ್ತಿದ್ದ. ಮದುವೆಯಾಗಲೂ ನಿಧಱರಿಸಿದ್ದ. ತಂದೆ ಮನೆ ಕಟ್ಟಿಸಲು ನಿಧಱರಿಸಿದಾಗ ರವಿಂದ್ರ ಒತ್ತಾಯಿಸಿ, ಫಸ್ಟ್ ಫ್ಲೋರ್ ಕೂಡಾ ಕಟ್ಟಿಸೋಣ ಎಂದಿದ್ದ. ಮನೆಯ ಆಧಾರ ಸ್ತಂಭ ರವೀಂದ್ರ ಹೇಳಿದ ಮಾತಿಗೆ ತಂದೆ ಇಲ್ಲವೆಂದಿಲ್ಲ. ಈಗ ಫಸ್ಟ್ ಫ್ಲೋರ್ ಅಧಱಕ್ಕೆ ನಿಂತಿದೆ. ಪ್ಲಾಸ್ಟರಿಂಗ್ ಇಲ್ಲ.
ರವೀಂದ್ರನ ಅಂತ್ಯಸಂಸ್ಕಾರಕ್ಕೆ ಏನಿಲ್ಲವೆಂದರೂ 20 ಕ್ಕೂ ಹೆಚ್ಚಿನ ಟಿವಿ9 ಗೆಳೆಯರು ದಾಸನಕೊಪ್ಪಕ್ಕೆ ಹೋಗಿದ್ದರು. ಕಸ್ತೂರಿ, ಏಷ್ಯಾನೆಟ್ ಸುವಣಱ, ದೂರದಶಱನ, ಉದಯ ಹಾಗೂ ಪ್ರಿಂಟ್ ಮೀಡಿಯಾದ ಻ನೇಕ ಗೆಳೆಯರು ಹೋಗಿದ್ದರು. ಅಂತ್ಯಕ್ರಿಯೆ ನಂತರ ಮನೆಗೂ ಹೋಗಿ ಸಾಂತ್ವಾನ ಹೇಳಿ ಬಂದಿದ್ದಾರೆ. ಆದರೆ ಆತನ ತಂದೆ, ತಾಯಿ, ಅಣ್ಣ ಅದರಲ್ಲು ವಿಶೇಷವಾಗಿ ರವೀಂದ್ರನ ಜೀವನ ಸಂಗಾತಿಯಾಗಬೇಕಿದ್ದ ಆ ಜೀವದ ದುಖ:ದ ಕಟ್ಟೆ ತಡೆಯಲು ಯಾರಿಗೂ ಸಾಧ್ಯವಾಗಿಲ್ಲ.
ರವೀಂದ್ರನ ತಾಯಿ ತುಂಬು ಗಣ್ಣುಗಳಿಂದ “ಬಂದು ಹೋಗ್ತಾ ಇರಿ. ನನ್ನ ಪಾಲಿಗೆ ಇನ್ನು ನೀವೆಲ್ಲರೂ ರವಿಂದ್ರರೇ”! ಎಂದಾಗಲಂತೂ ತಡೆಯಲಾಗದೇ ಟಿವಿ9 ಮಿತ್ರರೆಲ್ಲ ಬಿಕ್ಕಳಿಸಿ ಅತ್ತಿದ್ದಾರೆ.
ರವೀಂದ್ರನ ಅನೇಕ ಕನಸುಗಳಲ್ಲಿ ಮನೆಯೂ ಒಂದು. ಹೀಗಾಗಿ ಆ ದಿನ ಮನೆಗೆ ಹೋದ ಟಿವಿ9 ಮಿತ್ರರೆಲ್ಲ ರವೀಂದ್ರನ ಎಲ್ಲಾ ಕನಸುಗಳನ್ನು ಪೂತಿಱ ಗೊಳಿಸುವ ಶಕ್ತಿ ನಮಗಿಲ್ಲ. ಆದರೆ ಆತನ ನೆನಪಿಗೆ ನಾವೇ ಈ ಮನೆ ಕಟ್ಟಿಸಿಕೊಡುತ್ತೇವೆ. ಅದರ ಜವಾಬ್ದಾರಿ ನಮಗಿರಲಿ. ಎಂಬ ಭರವಸೆ ನೀಡಿ ಬಂದಿದ್ದಾರೆ.
ಇದು ತಿಳಿದು ರವೀಂದ್ರನ ಆತ್ಮಕ್ಕೆ ಸ್ವಲ್ಪವಾದರೂ ನೆಮ್ಮದಿ ಸಿಕ್ಕಿರಬಹುದೇನೋ??

ಆದರೆ ಯಾರೇನೇ ಮಾಡಿದರೂ, ಆ ಕುಟುಂಬಕ್ಕೆ ರವೀಂದ್ರನ ಅಗಲಿಕೆಯಿಂದ ಆದ ನಷ್ಟ ತುಂಬಿಕೊಡುವುದಾಗುವುದಿಲ್ಲ.
ಆದರೆ ಯಾಕೆ ಸುಖಮಯ ಜೀವನ ಆರಂಭವಾಗುವ ಸಂಧಭಱದಲ್ಲೇ ರವೀಂದ್ರ ಹೀಗೆ ಧಡ್ಡನೆ ಎದ್ದು ಹೊರಟು ಹೋದ ಎಂದು ಅಥಱವಾಗುತ್ತಿಲ್ಲ.
ರವೀಂದ್ರನ ಅಗಲಿಕೆ ಭರಿಸುವ ಶಕ್ತಿ ಆತನ ಕುಟುಂಬಕ್ಕೆ ಹಾಗೂ ಮಿತ್ರಮಂಡಳಿಗೆ ದೊರೆಯಲಿ.
* * *

Advertisements
Published in: on ಜೂನ್ 21, 2008 at 2:43 ಫೂರ್ವಾಹ್ನ  Comments (1)  

ಉತ್ತರ ಸಿಗದ ಪ್ರಶ್ನೆಯಾಗಿ ಹೋದ ಪದ್ಮಪ್ರಿಯಾ !

ಪದ್ಮಪ್ರಿಯಾ ಅವರ ಸಾವು ಉತ್ತರ ಸಿಗದ ಅನೇಕ ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಅವರದ್ದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬುದು ಈ ಘಟನೆಗೆ ಸಂಬಂಧಿಸಿದವರ ಆತ್ಮಸಾಕ್ಷಿಗಳಿಗೆ ಬಿಟ್ಟ ವಿಷಯ. ಆದರೆ ಅವರ ಸಾವು ಬಿಟ್ಟು ಹೋದ, ಉತ್ತರ ಸಿಗದ ಅನೇಕ ಪ್ರಶ್ನೆಗಳಿವೆ. ಇಂತಹ ಪ್ರಶ್ನೆಗಳಿಗೆ ಉತ್ತರ ಗೊತ್ತಿದ್ದರೆ ದಯವಿಟ್ಟು ನಮಗೂ ತಿಳಿಸಿ.
ಮೃತ ಪದ್ಮಪ್ರಿಯಾ ಅವರ ಗೌರವಾಥಱ ಅವರ ವಯಕ್ತಿಕ ಬದುಕು, ಡೈವೋಸಱ, ಅತುಲ್ ಜೊತೆಗಿನ ಸ್ನೇಹದ ಬಗೆಗಿನ ಪ್ರಶ್ನೆಗಳನ್ನು ಕೇಳಲಾಗಿಲ್ಲ. ಕೇವಲ ಅವರು ನಾಪತ್ತೆಯಾದ ನಂತರದ ಬೆಳವಣಿಗೆಗಳನ್ನು ಆಧರಿಸಿ ಪ್ರಶ್ನೆ ಕೇಳಲಾಗಿದೆ.
ನಿಮಗನ್ನಿಸಿದ್ದನ್ನು ಹಂಚಿಕೊಳ್ಳಿ. ನಿಮ್ಮಲ್ಲೂ ಇಂತಹ ಮಿಸ್ಸಿಂಗ್ ಲಿಂಕ್ ಪ್ರಶ್ನೆಗಳಿದ್ದರೆ ಕಳುಹಿಸಿ. ಅವುಗಳನ್ನು ಸೇರಿಸಿ ಅಪ್ ಡೇಟ್ ಮಾಡಬಹುದು.
ಹಾಗೆಯೇ ಯಾರಿಗಾದರೂ, ಈ ಪ್ರಶ್ನೆಗಳಿಗೆ ಏನಾದರೂ ಉತ್ತರ ಗೊತ್ತಿದ್ದರೆ. ಯಾರಾದರೂ ಪ್ರತ್ಯಕ್ಷ ದಶಿಱಗಳಿದ್ದರೆ, ಅತುಲ್, ಪದ್ಮಪ್ರಿಯಾ ವಿಮಾನದಲ್ಲಿ ಬಂದದ್ದನ್ನು ನೋಡಿದವರಿದ್ದರೆ, ಕಂಡವರಿದ್ದರೆ, ಅವರ ಸಂಪಕಱದಲ್ಲಿದ್ದವರಿದ್ದರೆ, ನಿಮಗೆ ತಿಳಿದದ್ದನ್ನು ಹಂಚಿಕೊಳ್ಳಿ. ಏನಾದರೂ ತಪ್ಪುಗಳಿದ್ದರೆ ತಕ್ಷಣ ಗಮನಕ್ಕೆ ತನ್ನಿ.

1. ಪದ್ಮಪ್ರಿಯಾರದ್ದು ಕಿಡ್ನಾಪೋ ಅಥವಾ ಸ್ವ ಇಚ್ಚೆಯ ಪಲಾಯನವೋ?
– ತಮ್ಮ ಪತ್ನಿಯದ್ದು ಅಪ್ಪಟ ಕಿಡ್ನಾಪ್ ಎನ್ನುವುದು ಶಾಸಕ ರಘುಪತಿ ಭಟ್ ಅವರ ಹೇಳಿಕೆ.
– ಒಂದು ವೇಳೆ ಅವರದ್ದು ಕಿಡ್ನಾಪ್ ಆಗಿದ್ದೇ ಆದಲ್ಲಿ, ಪದ್ಮಪ್ರಿಯಾ ಏಕೆ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಲಿಲ್ಲ?
– ಏಕೆಂದರೆ ಯಾವುದೇ ಮಹಿಳೆಯನ್ನು ಆಕೆಯ ಇಚ್ಚೆಗೆ ವಿರುದ್ದವಾಗಿ ಕನಾಱಟಕದಿಂದ ದೆಹಲಿವರೆಗೆ ಕರೆತರುವುದು ಅಸಾಧ್ಯ.
– ದಾರಿಯಲ್ಲಿ ಎಲ್ಲಿಯೋ ಒಂದು ಕಡೆ ಪದ್ಮಪ್ರಿಯಾ ಕಾಪಾಡಿ ಎಂದು ಕೂಗಿದ್ದರೂ, ಜನರು ಆಕೆಯನ್ನು ರಕ್ಷಿಸುತ್ತಿದ್ದರು. ಆದರೆ ಆಕೆ ಏಕೆ ಕೂಗಿಕೊಳ್ಳಲಿಲ್ಲ?
– ದೆಹಲಿ ವಸತಿ ಗೃಹದಲ್ಲಿ ಏಕಾಂಗಿಯಾಗಿ ಪದ್ಮಪ್ರಿಯಾ ಇದ್ದರು ಎನ್ನಲಾಗುತ್ತದೆ. ಆದರೆ ಆಗ ಪದ್ಮಪ್ರಿಯಾ ಏಕೆ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಲಿಲ್ಲ?
– ಕೊನೆಪಕ್ಷ ತಮ್ಮ ಪತಿ ರಘುಪತಿ ಭಟ್ ಅಥವಾ ತವರಿಗೂ ಏಕೆ ಫೋನ್ ಕರೆಯನ್ನಾದರೂ ಮಾಡಲಿಲ್ಲ?

2. ಪಲಾಯನವಾಗಿದ್ದಲ್ಲಿ, ಕಾರಿನಲ್ಲಿ ಬಳೆ ಚೂರುಗಳು ಬಂದದ್ದು ಹೇಗೆ?
– ಪದ್ಮಪ್ರಿಯಾ ಸ್ವಂತ ಇಚ್ಚೆಯಿಂದ ಅತುಲ್ ಜೊತೆ ಬಂದಿದ್ದಲ್ಲಿ, ಅವರ ಕಿಡ್ನಾಪ್ ಆಗಿದೆ ಎಂಬ ಸನ್ನಿವೇಶ ಸೃಷ್ಟಿಸಿದವರು ಯಾರು?
– ಪದ್ಮಪ್ರಿಯಾ ಸ್ವಂತ ಇಚ್ಚೆಯಿಂದ ಅತುಲ್ ಜೊತೆ ಬಂದಿದ್ದಲ್ಲಿ, ಅವರು ಬಿಟ್ಟು ಬಂದಿದ್ದ ಕಾರಿನಲ್ಲಿ ಒಡೆದ ಬಳೆ ಚೂರುಗಳು ಬಂದದ್ದಾದರೂ ಹೇಗೆ?
– ಆ ಕಾರಿನಲ್ಲಿ ಸಿಕ್ಕ ಮಾತ್ರೆ, ಹಣ, ಮೊಬೈಲ್ ತಂದಿಟ್ಟದ್ದಾದರೂ ಯಾರು?
– ಏಕೆ ಅವರನ್ನು ಈ ರೀತಿ ಕಾರಿನಿಂದ ಕಿಡ್ನಾಪ್ ಮಾಡಲಾಗಿದೆ ಎಂಬಂತಹ ದೃಶ್ಯ ಅಲ್ಲಿ ಸೃಷ್ಟಿಸಲಾಯಿತು?
– ಇದರಲ್ಲಿ ಯಾರ ಕೈವಾಡವಿದೆ?
– ಪದ್ಮಪ್ರಿಯಾ ಅವರದ್ದು ಕಿಡ್ನಾಪ್ ಆಗಿದ್ದಲ್ಲಿ ಮಾತ್ರ ಇಂತಹ ಸನ್ನಿವೇಶ ಸೃಷ್ಟಿಯಾಗಲು ಸಾಧ್ಯ.
– ಹಾಗಾದರೆ ನಿಜ ಏನು? ಉತ್ತರ ರಘುಪತಿ ಭಟ್, ಪೊಲೀಸರು ಹಾಗೂ ಅತುಲ್ ಗೆ ಮಾತ್ರ ಗೊತ್ತಿರಲು ಸಾಧ್ಯ.

3. ದೂರು ನೀಡಲಿಲ್ಲ ಏಕೆ?
– ತಮ್ಮ ಪತ್ನಿ ಕಾಣೆಯಾಗಿ 3 ದಿನಗಳಾದರೂ ರಘುಪತಿ ಭಟ್ ದೂರು ನೀಡಿರಲಿಲ್ಲ ಏಕೆ?
– ಕೊನೆ ಪಕ್ಷ ಪತ್ನಿ ತವರು ಮನೆಯನ್ನಾದರೂ ಸಂಪಕಿಱಸಿ, ಸುರಕ್ಷಿತವಾಗಿ ತಲುಪಿದ್ದಾಳೋ ಇಲ್ಲವೋ ಎಂದು ತಿಳಿದುಕೊಳ್ಳುವ ಕುತೂಹಲ ಏಕೆ ತೋರಲಿಲ್ಲ?
– ಪತ್ನಿಯ ಮನೆಯ ಲ್ಯಾಂಡ್ ಲೈನ್ ಕೆಟ್ಟಿತ್ತು ಎಂಬ ಸಬೂಬು ಕೇಳಿ ಬರುತ್ತಿದೆ. ಪದ್ಮಪ್ರಿಯಾ ನಾಪತ್ತೆಯಾಗಿ ಮತ್ತೆ ಆಕೆಯ ಸುದ್ದಿ ತಿಳಿದು ಬರುವವರೆಗಷ್ಟೇ ಮೂರು ದಿನ ಲ್ಯಾಂಡ್ ಫೋನ್ ಕೆಡುತ್ತದೆ ಎಂದರೆ ಏನಥ್ಱ?
– ಹೋಗಲಿ ಲ್ಯಾಂಡ್ ಫೋನ್ ಕೆಟ್ಟಿದ್ದರೂ, ಅವರ ಸಹೋದರರ ಬಳಿ ಮೊಬೈಲ್ ಇತ್ತು. ಅವರಿಗಾದರೂ ಫೋನ್ ಮಾಡಿ ಏಕೆ ಕೇಳಲಿಲ್ಲ?
– ಯಾರೇ ಆಗಲಿ ತಮ್ಮ ಪತ್ನಿ ಅಥವಾ ಕುಟುಂಬ ಎಲ್ಲಿಗಾದರೂ ಹೊರಟರೆ, ನಿಧಿಱಷ್ಟ ಸಮಯದ ನಂತರ ಕರೆ ಮಾಡಿ, ಅವರು ಸುರಕ್ಷಿತವಾಗಿ ತಲುಪಬೇಕಾದ ಕಡೆ ತಲುಪಿದರೋ ಇಲ್ಲವೋ ಎಂದು ತಿಳಿದುಕೊಳ್ಳುವುದು ಸಾಮಾನ್ಯ. ಆದರೆ ರಘುಪತಿ ಭಟ್ ಅವರ ಈ ವತಱನೆಗೆ ಏನು ಕಾರಣ?

4. ಅತುಲ್ ನನ್ನು ವಶಕ್ಕೆ ತೆಗೆದುಕೊಂಡ ನಂತರ ನಡೆದದ್ದಾದರೂ ಏನು?
– ಅತುಲ್ ನನ್ನು ಜೂನ್ 13 ರಂದು ಪೊಲೀಸರು ವಶಕ್ಕೆ ತೆಗೆದುಕೊಂಡದ್ದಾಗಿ ಪೊಲೀಸರು ಹೇಳಿದ್ದರು. ಅದೇ ದಿನ ಅತುಲ್ ಹಾಗೂ ಪದ್ಮಪ್ರಿಯಾ ಕೋಲಾರದ ಮಾಲೂರು ಸಮೀಪದ ಗೆಸ್ಟ್ ಹೌಸ್ ನಲ್ಲಿ ಸಿಕ್ಕಿರುವುದಾಗಿ ಪೊಲೀಸರು ಹೇಳಿದರು. ರಾಜ್ಯದ ಗೃಹ ಸಚಿವ ವಿ.ಎಸ್.ಆಚಾಯಱ ಹೇಳಿದರು. ಸ್ವತ: ಮುಖ್ಯಮಂತ್ರಿಗಳೂ ಹೇಳಿಕೆ ನೀಡಿದರು.
– ಒಂದು ವೇಳೆ ಮಾಲೂರಿನಲ್ಲಿ ಸಿಕ್ಕದ್ದು ನಿಜವಾದರೆ, ಪದ್ಮಪ್ರಿಯಾ ದೆಹಲಿಯಲ್ಲಿ ಹೆಣವಾಗಿ ಪ್ರತ್ಯಕ್ಷರಾದದ್ದು ಹೇಗೆ?
– ಮಾಲೂರಿನಲ್ಲಿ ಸಿಕ್ಕಿಲ್ಲ ಎನ್ನುವುದಾದರೆ ಪೊಲೀಸರೇಕೆ ಸುಳ್ಳು ಹೇಳಿದರು? ಗೃಹ ಸಚಿವರೂ, ಮುಖ್ಯಮಂತ್ರಿಗಳು ಏಕೆ ಹೇಳಿಕೆ ನೀಡಿದರು?
– ಇಲ್ಲಿ ಮುಖ್ಯಮಂತ್ರಿಗಳಿಗೆ, ಗೃಹ ಸಚಿವರಿಗೆ ಆಗದ ಕೆಲ ಪೊಲೀಸರೇನಾದರೂ ಇಡೀ ಸರಕಾರವನ್ನೇ ಹಾದಿ ತಪ್ಪಿಸಿದರಾ?
– ಅಥವಾ ನಿಜಕ್ಕೂ ಮಾಲೂರಿನಲ್ಲಿ ಸಿಕ್ಕವರನ್ನು ದೆಹಲಿಗೆ ಕರೆತಂದು ಬೇರೇನಾದರೂ ನಾಟಕ ನಡೆಸಿದರಾ?
– ಮಾಲೂರಿನ ಸಿಕ್ಕರು ಅಂತ ಸುದ್ದಿ ಹುಟ್ಟು ಹಾಕಿದವರು ಯಾರು?
– ಆಚಾಯಱ ಅವರು ಮಾಧ್ಯಮಗಳ ಗಮನ ಬೇರೆಡೆಗೆ ಸೆಳೆಯಲು ಪೊಲೀಸರು ಹೀಗೆ ಹೇಳಿದ್ದಿರಬಹುದು ಎಂದಿದ್ದರು. ಈ ಹೇಳಿಕೆಯನ್ನು ನಂಬುವುದಾದರೆ, 13 ರಂದೇ ಪದ್ಮಪ್ರಿಯಾ ದೆಹಲಿಯಲ್ಲಿದ್ದಾರೆ ಎಂಬ ವಿಷಯ ಪೊಲೀಸರಿಗೆ ತಿಳಿದಿತ್ತು ಎಂದು ಸಾಬೀತಾಗುತ್ತದೆ. ಏಕೆಂದರೆ ದೆಹಲಿಯಲ್ಲಿದ್ದಾರೆ ಎಂದು ತಿಳಿದದ್ದರಿಂದಲೇ ಅತ್ತ ಕಡೆ ಮಾಧ್ಯಮಗಳ ಗಮನ ಹರಿಯಬಾರದು ಎಂದು ಕೋಲಾರದ ಕಡೆ ತಿರುಗಿಸಿದ್ದು ಎಂದಂತಾಗುತ್ತದೆ.
– ಹಾಗಾದರೆ 13 ರಂದೇ ಪದ್ಮಪ್ರಿಯಾ ದೆಹಲಿಯಲ್ಲಿದ್ದಾರೆಂದು ತಿಳಿದು ಬಂದಿರಬೇಕು. ಆದ್ದರಿಂದಲೇ ಈ ರೀತಿ ಜನರನ್ನು, ಮಾಧ್ಯಮದವರನ್ನು ಮಿಸ್ ಗೈಡ್ ಮಾಡಿರಬಹುದು.

– 13 ರಂದೇ ಪದ್ಮಪ್ರಿಯಾ ಎಲ್ಲಿದ್ದಾರೆಂದು ತಿಳಿದು ಬಂದಿದ್ದರೆ 15 ರ ಸಂಜೆಯವರೆಗೆ, ಪದ್ಮಪ್ರಿಯಾ ಹೆಣವಾಗುವವರೆಗೆ ಪೊಲೀಸರೇನು ಮಾಡುತ್ತಿದ್ದರು?
– ತಕ್ಷಣ ದೆಹಲಿ ಪೊಲೀಸರನ್ನು ಸಂಪಕಿಱಸಿ, ಪದ್ಮಪ್ರಿಯಾ ಅವರನ್ನು ರಕ್ಷಿಸಲು ಕ್ರಮ ತೆಗೆದುಕೊಳ್ಳಬಹುದಿತ್ತು.
– ಹಾಗಾದರೆ ಏಕೆ ಈ ಕ್ರಮ ತೆಗೆದುಕೊಳ್ಳಲಿಲ್ಲ? 15 ರ ವರೆಗೆ ಏನು ಮಾಡುತ್ತಿದ್ದರು?

– ಪದ್ಮಪ್ರಿಯಾ ಮೃತ ಪಟ್ಟಿರುವ ಸುದ್ದಿ ತಿಳಿದಿದ್ದರೂ, ಪೊಲೀಸರು ಅದನ್ನು ಹೊರಹಾಕಿರಲಿಲ್ಲ. ಟಿವಿ9 ನಲ್ಲಿ ಸಂಜೆ 6 ಗಂಟೆ ಹೊತ್ತಿಗೆ ಪದ್ಮಪ್ರಿಯಾ ಸಾವಿನ ಸುದ್ದಿ ಬ್ರೇಕ್ ಆಗುತ್ತಲೇ ದಡಬಡನೆ ಪೊಲೀಸರು ಸುದ್ದಿಗೋಷ್ಟಿ ಕರೆದು, ವಿಷಯ ತಿಳಿಸಿದ್ದರು. ಅದುವರೆಗೆ ಯಾಕೆ ವಿಷಯ ಮುಚ್ಚಿಡಲಾಗಿತ್ತು?

5. ರಘುಪತಿ ಭಟ್ ದೆಹಲಿಗೆ ಬಂದದ್ದು ಎಂದು?
– ರಘುಪತಿ ಭಟ್ ಅವರು ದೆಹಲಿಗೆ ಬಂದದ್ದು ಯಾವಾಗ ಎಂಬ ಬಗ್ಗೆ ಅನುಮಾನಗಳಿವೆ. ಅವರು ಜೂನ್ 14 ರ ರಾತ್ರಿ ಬಂದಿದ್ದರೋ? ಅಥವಾ 15 ರ ಬೆಳಿಗ್ಗೆ ಬಂದಿದ್ದರೋ?
– 14 ರಾತ್ರಿ ಬಂದಿದ್ದರೆ 15 ರ ಮದ್ಯಾಹ್ನದವರೆಗೆ ದೆಹಲಿಯಲ್ಲಿ ಏನು ಮಾಡುತ್ತಿದ್ದರು?
– 15 ರ ಬೆಳಿಗ್ಗೆ ಬಂದದ್ದಾದರೆ ಎಷ್ಟು ಗಂಟೆಗೆ ಬಂದರು? ಬಂದ ನಂತರ ಸೀದಾ ಅಪಾಟ್ಱಮೆಂಟ್ ಗೆ ಹೋದರಾ ಅಥವಾ ಪೊಲೀಸರ ನೆರವು ಪಡೆದು ಅವರೊಂದಿಗೆ ಬಂದರಾ?
– ರಘುಪತಿ ಭಟ್ ಅವರೊಂದಿಗೆ ಬೇರೆ ಇನ್ನಾರಾದರೂ ಬಂದಿದ್ದರಾ?

6. ಅಪಾಟಱಮೆಂಟ್ ರಿಜಿಸ್ಟ್ರಿ ಏನು ಹೇಳುತ್ತೆ?
– ಟಿವಿ9 ಜೊತೆ ಮಾತನಾಡಿದ್ದ ಸೆಕ್ಯೂರಿಟಿ ಗಾಡ್್ ಹೇಳಿದ್ದ ಪ್ರಕಾರ ಅತುಲ್ ದೆಹಲಿಗೆ ಬಂದದ್ದು ಜೂನ್ 2 ರಂದು.
– ನಂತರ ಆತನನ್ನು ನೋಡಿದ್ದು ಜೂನ್ 10 ರಂದು ರಾತ್ರಿ 10.30 ಕ್ಕೆ. ಆಗ ಅತುಲ್ ಜೊತೆ ಒಬ್ಬ ಲೇಡಿ ಇದ್ದಳು. ಆದರೆ ಆಕೆ ಯಾರು ಅಂತ ನನಗೆ ಗೊತ್ತಿಲ್ಲ ಅಂತಾನೆ ಸೆಕ್ಯೂರಿಟಿ.
– ಆದರೆ ಜೂನ್ 2, ಹಾಗೂ ಜೂನ್ 10 ರಂದು ಅತುಲ್ ಅಪಾಟ್ಱಮೆಂಟ್ ಗೆ ಭೇಟಿ ನೀಡಿದ್ದ ಬಗ್ಗೆ ರಿಜಿಸ್ಟ್ರಿಯಲ್ಲಿ ಎಂಟ್ರಿ ಇಲ್ಲ. ಎಂಟ್ರಿ ಏಕಿಲ್ಲ?
– ಅತುಲ್ ಎಂಟ್ರಿ ಇರೋದು ಕೇವಲ 15 ನೇ ತಾರೀಖು ಮಾತ್ರ.
– 15 ರಂದು 2.30 ಕ್ಕೆ ಅತುಲ್+3 ಜನರು ಅಪಾಟ್ಱಮೆಂಟ್ ಗೆ ಭೇಟಿ ನೀಡ್ತಾರೆ. 3 ಗಂಟೆಗೆ ಹೊರಗೆ ಬತಾಱರೆ. ಆದರೆ ಈ ಮೂವರು ಯಾರು ಎಂದು ಅತುಲ್ ಹೊರತಾಗಿ ಬೇರೆಯವರಿಗೆ ಗೊತ್ತಿಲ್ಲ. ಯಾರೀ ಮೂವರು???
– ನಂತರ ಮತ್ತೆ ಸಂಜೆ 6.15 ಕ್ಕೆ ಅತುಲ್ ಮತ್ತು ಪೊಲೀಸರು ಒಳಗೆ ಹೋಗಿದ್ದ ಬಗ್ಗೆ ನಮೂದಾಗಿದೆ. ಆದರೆ ಹೊರಗೆ ಎಷ್ಟು ಗಂಟೆಗೆ ಹೋದರು ಎಂದು ಗೊತ್ತಿಲ್ಲ.
– ಮದ್ಯಾಹ್ನ ಅತುಲ್ ಹಾಗೂ ಇತರೆ ಮೂವರು ಒಳಗೆ ಹೋದಾಗ ಪದ್ಮಪ್ರಿಯಾ ಇನ್ನೂ ಬದುಕಿದ್ದಳೆ?
– ಆಗ ಯಾರಾದರೂ ಆಕೆಯ ಮನವೊಲಿಸಲು ಯತ್ನಿಸಿದ್ದರಾ ಅಥವಾ ಅಷ್ಟು ಹೊತ್ತಿಗಾಗಲೇ ಆಕೆ ಯಾರಿಗೂ ಬಾಗಿಲು ತೆಗೆಯದೇ ಆತ್ಮಹತ್ಯೆ ಮಾಡಿಕೊಂಡಿದ್ದಳೇ?
– ಮದ್ಯಾಹ್ನ 3 ಗಂಟೆ ಹೊತ್ತಿಗೆ ಆತ್ಮಹತ್ಯೆ ಮಾಡಿಕೊಂಡು, ಬಾಗಿಲು ತೆಗೆಯದೇ ಇದ್ದಲ್ಲಿ, ಅತುಲ್ ಹಾಗೂ ಇತರೆ ಮೂವರು ಮರಳಿ ಹೋಗಿದ್ದೇಕೆ? ಆಗಲೇ ಬಾಗಿಲು ಒಡೆಯಬಹುದಿತ್ತು.
– ಹೊರ ಹೋಗಿ ಮೂರು ಗಂಟೆ 15 ನಿಮಿಷಗಳ ನಂತರ ಪೊಲೀಸರೊಂದಿಗೆ ಬರುವುದರ ಅಥಱ ಏನು? ಈ ಮೂರು ಗಂಟೆಗಳ ಕಾಲ ಻ಲ್ಲಿ ಏನು ನಡೆಯಿತು?
– ಈ ಎರಡೂ ಸಂದಭಱದಲ್ಲಿ ರಿಜಿಸ್ಟ್ರಿಯಲ್ಲಿ ಕೇವಲ ಹಿಂದಿಯಲ್ಲಿ ಬರೆಯಲಾಗಿದೆ. ಅತುಲ್ ಸಹಿ ಸಹ ಹಿಂದಿಯಲ್ಲಿದೆ. ಹಾಗಾದರೆ ಅತುಲ್ ಏಕೆ ಸಹಿ ಮಾಡಿಲ್ಲ?
– ನಿಧಿಱಷ್ಟವಾಗಿ ಬಾಗಿಲು ಒಡೆದದ್ದು ಎಷ್ಟು ಗಂಟೆಗೆ? ಶವ ಯಾವ ಸ್ಥಿತಿಯಲ್ಲಿತ್ತು? ರಘುಪತಿ ಭಟ್ ಎಷ್ಟು ಗಂಟೆಗೆ ಬಂದು ತಮ್ಮ ಪತ್ನಿಯ ಶವ ನೋಡಿಕೊಂಡು ಹೋದರು?

7. ಮನೆ ನಂಬರ್ 20 ಹೇಗಿದೆ?
– ಹೆಸರು ಹೇಳಲಿಚ್ಚಿಸದ ನೆರಮನೆಯವರ ಪ್ರಕಾರ ಅವರಿಗೆ ಪದ್ಮಪ್ರಿಯಾ ಆಥ್ಮಹತ್ಯೆ ಮಾಡಿಕೊಂಡಿದ್ದ ಮನೆ ನಂಬರ್ 20 ರಲ್ಲಿ ಯಾರೋ ಇದ್ದಾರೆ ಅಂತ ತಿಳಿದು ಬಂದದ್ದೇ ಪೊಲೀಸರು ಬಂದಾಗ.
– ಮನೆಯ ಕಸ ಗುಡಿಸಿಲ್ಲ.ಒಳಗೆ ಕುಚಿಱಗಳ ಮೇಲೆ ದೂಳು ಕವಿದಿದೆ. ಅಂದರೆ ಅಲ್ಲಿ ಜನರು ವಾಸಿಸುತ್ತಿರಲಿಲ್ಲ ಎಂದು ಅಥಱವಲ್ಲವೆ?
– ಆ ಮನೆಯಲ್ಲಿ ಪದ್ಮಪ್ರಿಯ 12 ನೇ ತಾರೀಖಿನಿಂದ ಒಬ್ಬರೇ ಏಕಾಂಗಿಯಾಗಿದ್ದರೇ? ಹಾಗಾದರೆ ಅಡುಗೆಗೆ ಏನು ವ್ಯವಸ್ಥೆ ಇತ್ತು?
– ಮನೆ ಇನ್ನೂ ಸಂಪೂಣಱವಾಗಿ ಸಿದ್ದವಾಗಿರಲಿಲ್ಲ. ಹೀಗಾಗಿ ಅಡುಗೆ ಮಾಡಿಕೊಳ್ಳುವ ಸಾಧ್ಯತೆಗಳೇ ಇರಲಿಲ್ಲ. ಹಾಗಾದರೆ ಪದ್ಮಪ್ರಿಯಾ ಊಟಕ್ಕೆ ಏನು ಮಾಡುತ್ತಿದ್ದರು?
– ಸೆಕ್ಯೂರಿಟಿ ಗಾಡ್ಱ ಗಳ ಹತ್ತಿರವಾದರೂ ತರಕಾರಿ, ಹಾಲು ತರಿಸಿಕೊಂಡಿಲ್ಲ. ಹೀಗಾಗಿ ಅವರು ಆ ಅಪಾಟಱಮೆಂಟ್ ನಲ್ಲಿ 15 ನೇ ತಾರಿಖಿನ ವರೆಗೆ ವಾಸಿಸಿರುವ ಬಗ್ಗೆಯೇ ಅನುಮಾನವಿದೆ.
-15 ರ ವರೆಗೆ ಅಪಾಟ್ಱಮೆಂಟ್ ನಲ್ಲಿ ಇರಲಿಲ್ಲ ಎಂದಾದರೆ 3-4 ದಿನ ಪದ್ಮಪ್ರಿಯ ದೆಹಲಿಯಲ್ಲಿ ಇದ್ದದ್ದಾದರೂ ಎಲ್ಲಿ? ಅಪಾಟ್ಱ ಮೆಂಟ್ ನಲ್ಲಿ ಎನ್ನುವುದಾದರೆ ಆಕೆ ಅಲ್ಲಿದ್ದ ಬಗ್ಗೆ ಹೆಚ್ಚು ಕುರುಹುಗಳಿಲ್ಲ.
– ಈ ಅಪಾಟಱಮೆಂಟ್ ನಿಂದ ಯಾವ ವಸ್ತುಗಳನ್ನು ವಶ ಪಡಿಸಿಕೊಳ್ಳಲಾಗಿದೆ?
– ಈ ಅನುಮಾನಗಳಿಗೆ ಉತ್ತರ ಹೇಳೋರು ಯಾರು?

8. ಪದ್ಮಪ್ರಿಯಾ ಟಿವಿ9 ನೋಡಿ ನೇಣು ಹಾಕಿಕೊಂಡಳಾ?
– ಹೌದು ಎನ್ನುವುದಾದರೆ ಪದ್ಮಪ್ರಿಯಾ ನೇಣು ಹಾಕಿಕೊಳ್ಳುವುದನ್ನು ರಘುಪತಿ ಭಟ್ ನೋಡಿದ್ದರು ಎಂಬಂತಾಗುತ್ತದೆ.
– ಪದ್ಮಪ್ರಿಯಾ ಟಿವಿ9 ನೋಡಿ ನೇಣು ಹಾಕಿಕೊಂಡಳು. ಅದರಲ್ಲಿ ಅತುಲ್ ನನ್ನು ಬಂಧಿಸಿ ದೆಹಲಿಗೆ ಕರೆತರಲಾಗುತ್ತಿದೆ ಎಂಬುದನ್ನು ನೋಡಿ ಆತ್ಮಹತ್ಯೆ ಮಾಡಿಕೊಂಡಳು ಎಂದು ಭಟ್ಟರು ಮಾಧ್ಯಮಗಳ ವಿರುದ್ಧವೇ ಕಿಡಿ ಕಾರಿದ್ದರು.
– ಆದರೆ ಟಿವಿ9 ನಲ್ಲಿ ದೆಹಲಿಗೆ ಅತುಲ್ ನನ್ನು ಕರೆದುಕೊಂಡು ಬರುವ ಬಗ್ಗೆ ಯಾವುದೇ ಸುದ್ದಿ ಪ್ರಕಟವಾಗಿರಲೇ ಇಲ್ಲ.
– ಆಕೆ ಟಿವಿ9 ನೋಡಿ ಆತ್ಮಹತ್ಯೆ ಮಾಡಿಕೊಂಡಳು ಎನ್ನುವುದಾದರೆ ಭಟ್ಟರಿಗೆ ಆಕೆ ಆತ್ಮಹತ್ಯೆ ಮಾಡಿಕೊಳ್ಳುವ ಸಮಯ ತಿಳಿದಿತ್ತು ಎಂದೇ ಅಥಱ.
– ಇಲ್ಲದಿದ್ದರೆ ಅವರಿಗೆ ಹೇಗೆ ಟಿವಿ9 ನಲ್ಲಿ ಇಷ್ಟು ಗಂಟೆಗೆ ಇಂತದ್ದೇ ಸುದ್ದಿ ಬತಿಱತ್ತು. ಅದನ್ನು ನೋಡಿ ಆಕೆ ಆತ್ಮಹತ್ಯೆ ಮಾಡಿಕೊಂಡಳು ಎಂದು ತಿಳಿದದ್ದು? ಅವರೇನು ಮಹಾಭಾರತದ ಸಂಜಯನೇ??? ಅಥವಾ ತಮ್ಮ ಪತ್ನಿ ಟಿವಿ9 ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುತಿದ್ದದ್ದನ್ನು ಅವರು ಅದೇ ಕೊಠಡಿಯಲ್ಲಿ ಕುಳಿತು ನೋಡಿದರೆ? ಇಂತಹ ಹೇಳಿಕೆಗಳಿಗೆ ಯಾವ ಕಡೆಯಿಂದ ನಗಬೇಕು???
– ಅಷ್ಟೇ ಅಲ್ಲ… ಅತುಲ್ ದೆಹಲಿ ಪೊಲೀಸರ ಕಸ್ಟಡಿಯಲ್ಲಿದ್ದಾನೆ ಅಂತ ರಘುಪತಿ ಹೇಳಿದ್ದರು. ಆದರೆ ಮರು ದಿನ ದೆಹಲಿ ಪೊಲೀಸರು ನಮಗೂ ಇದಕ್ಕೂ ಸಂಬಂಧವಿಲ್ಲ. ಅತುಲ್ ನಮ್ಮ ಬಳಿ ಇಲ್ಲ. ಬಂಧಿಸುವುದಿದ್ದರೆ ಕನಾಱಟಕ ಪೊಲೀಸರೇ ಆತನನ್ನು ಬಂಧಿಸಿಕೊಳ್ಳಲಿ ಎಂದಿದ್ದರು. ಹಾಗಾದರೆ ರಘುಪತಿಯವರು ಏಕೆ ಅತುಲ್ ದೆಹಲಿ ಪೊಲೀಸರ ಜೊತೆ ಇದ್ದಾನೆ ಎಂಬ ಸುಳ್ಳು ಮಾಹಿತಿಯನ್ನು ಮಾಧ್ಯಮದವರಿಗೆ ನೀಡಿ, ಅವರ ಹಾದಿ ತಪ್ಪಿಸಲು ಯತ್ನಿಸಿದ್ದು??

– ಕನಾಱಟಕ ಪೊಲೀಸರೇಕೆ ಅತುಲ್ ನನ್ನು ಬಂಧಿಸದಿದ್ದರೂ ಆತನನ್ನು ಯಾರಿಗೂ ತಿಳಿಯದಂತೆ 3-4 ದಿನ ತಮ್ಮ ವಶದಲ್ಲಿಟ್ಟುಕೊಂಡಿದ್ದರು?
– ಅತುಲ್ ಪತ್ನಿ ನ್ಯಾಯಾಲಯದಲ್ಲಿ ಹೆಬಿಯಸ್ ಕಾಪಱಸ್ ಅಜಿಱ ಸಲ್ಲಿಸುವವರೆಗೆ ಪೊಲೀಸರೇಕೆ ಅತುಲ್ ಎಲ್ಲಿದ್ದಾನೆ ಎಂದು ಹೇಳಿರಲಿಲ್ಲ..??

…….ಹೀಗೆ ಪಟ್ಟಿ ಮಾಡ್ತಾ ಹೋದ್ರೆ ಪದ್ಮಪ್ರಿಯಾ ಇರೋ ಸ್ವಗಱವನ್ನೇ ಮುಟ್ಟುವಷ್ಟು ಉದ್ದದ ಪಟ್ಟಿ ಸಿದ್ದ ಪಡಿಸಬಹುದು. ಪದ್ಮಪ್ರಿಯಾ ಅವರದ್ದು ಆತ್ಮಹತ್ಯೆ ಆಗಿದ್ದರೂ. ಅದೇ ರೀತಿ ಪೋಸ್ಟ್ ಮಾಟಱಂ ವರದಿ ಬಂದರೂ, ಈ ಪ್ರಶ್ನೆಗಳು ಮಾತ್ರ ಹಾಗೇ ಉಳಿದು ಬಿಡುತ್ತವೆ.
ಇವುಗಳಿಗೆ ಯಾವ ಶವ ಪರೀಕ್ಷೆ ತಾನೆ ಉತ್ತರ ನೀಡಬಲ್ಲದು???
ಪದ್ಮಪ್ರಿಯಾ ಆತ್ಮಕ್ಕೆ ಶಾಂತಿ ಸಿಗಲಿ.

Published in: on ಜೂನ್ 19, 2008 at 2:16 ಫೂರ್ವಾಹ್ನ  Comments (3)