ಅಬೌಟ್ ಬೇದ್ರೆ ಮಂಜುನಾಥ್ ವಿಥ್ ಜೆಲಸ್!

Satish Shile

Photo courtesy: Satish Shile

ಓದುವ ಮುನ್ನ:
ಜುಲೈ 13 ರಂದು ಸಾವಿನ ನಂತರವೇ ಏಕೆ? ಎಂಬ ಬರಹದಲ್ಲಿ ನಾನು ಯಾರಿಂದೆಲ್ಲ ಪ್ರೇರಿತನಾಗಿದ್ದೇನೆ, ಅಥವಾ ಯಾರಿಂದ ಸ್ವಲ್ಪವಾದರೂ ಕಲಿತಿದ್ದೇನೆ, ಅಂತಹವರ ಬಗ್ಗೆ ಇನ್ನು ಮುಂದೆ ಬರೆಯುತ್ತೇನೆ ಎಂದಿದ್ದೆ.
ಈಗ ಈ ಸರಣಿಯ ಮೊದಲ ವ್ಯಕ್ತಿಯಾಗಿ ಬೇದ್ರೆ ಮಂಜುನಾಥ್ ಅವರನ್ನು ಆಯ್ಕೆ ಮಾಡಿಕೊಂಡಿದ್ದೇನೆ. ಓದಿದ ನಂತರ ನನ್ನ ಆಯ್ಕೆ ಸರಿಯಾಗಿದ್ದರೆ ನನಗೂ ತಿಳಿಸಿ. ಇಲ್ಲಿ ಬರೆಯುವ ಬಗ್ಗೆ ಬೇದ್ರೆ ಅವರಿಗೆ ನಾನು ತಿಳಿಸಿಯೇ ಇಲ್ಲ. ಹೀಗಾಗಿ ಇದರಲ್ಲಿ ಅವರ ಮನಸ್ಸಿಗೆ ನೋವಾಗುವಂತದ್ದು ಏನಾದರೂ ಇದ್ದರೆ ಈಗಲೇ ಕ್ಷಮೆ ಕೇಳಿ ಬಿಡುತ್ತೇನೆ.
ಓದಿದ ನಂತರ ಬೇದ್ರೆ ಬರಹಗಳ ಬಗ್ಗೆ, ಅವರ ಭಾಷಾ ಪ್ರಯೋಗಗಳ ಬಗ್ಗೆ ಆಸಕ್ತಿ ಇದ್ದವರು ಈ ಕೆಳಗಿನ ಬ್ಲಾಗ್ ಗಳಿಗೆ ಭೇಟಿ ನೀಡಬಹುದು.

www.bedrebaraha.blogspot.com
www.bedrebrains.blogspot.com
www.bedrefoundation.blogspot.com
www.bedrebhashe.blogspot.com
ಬೇದ್ರೆ ಮಂಜುನಾಥ್ ವಿಳಾಸ:
Bedre Foundation for Non-Formal Education, Research and Training, Teacher’s Colony, Chitradurga – 577501, Hobby & Adventure UNESCO Club, Chitradurga bedre.manjunath@gmail.com.
ಮೊಬೈಲ್:94485-89089, ಅಥವಾ (08194)228074.
* * * * * * * * * * * * * * * * * *
ಐ ಯಾಮ್ ರಿಯಲಿ ಜೆಲಸ್ ಆಫ್ ಹಿಮ್ !
ಆದರೆ ಇದು ಹೊಟ್ಟೆಕಿಚ್ಚಿನ ಜೆಲಸ್ ಅಲ್ಲ. ಬದಲಿಗೆ ಮೆಚ್ಚುಗೆಯ ಜೆಲಸ್!!
ಅವರಷ್ಟು ಕ್ರಿಯಾಶೀಲವಾಗಿ, ಆರೋಗ್ಯಕರವಾಗಿ, ಲವಲವಿಕೆಯಿಂದ, ಹೊಸ ಯೋಚನೆಗಳೊಂದಿಗೆ, ಯೋಜನೆಗಳೊಂದಿಗೆ ನಮಗೆ ಬದುಕಲಾಗುತ್ತಿಲ್ಲವಲ್ಲ ಎಂಬ ಮೆಚ್ಚುಗೆ, ಗೌರವ, ಪ್ರೀತಿ, ಅಚ್ಚರಿಗಳು ಬೆರೆತ ಆರೋಗ್ಯಕರ ಜೆಲಸಿ.
ಈ ಮಾತು ನಾನು ಹೇಳಬಯಸೋದು ಬೇದ್ರೆ ಮಂಜುನಾಥ್ ಬಗ್ಗೆ.
ಬೇಂದ್ರೆ ಮಂಜುನಾಥ್ ಯಾರು ಎಂದು ಕನ್ನಡಿಗರಿಗೆ, ಪುಸ್ತಕ ಪ್ರೇಮಿಗಳಿಗೆ ಹೇಳುವ ಅವಶ್ಯಕತೆ ಇಲ್ಲ. ಚಿತ್ರದುರ್ಗದ ಆಕಾಶವಾಣಿಯಲ್ಲಿದ್ದರೂ, ಸರಕಾರಿ ಹುದ್ದೆಯ ಮಿತಿಗಳಿದ್ದರೂ, ಅವುಗಳನ್ನೆಲ್ಲಾ ಮೀರಿದ ಕ್ರಿಯಾಶೀಲತೆ ಬೇದ್ರೆ ಮಂಜುನಾಥ್ ಅವರದ್ದು.
* * *
ನಾನು ಹೈಸ್ಕೂಲ್ ಓದುತ್ತಿದ್ದಾಗ ದಿಕ್ಸೂಚಿ ಜ್ಞಾನ ಮಾಸ ಪತ್ರಿಕೆ ಕೊಳ್ಳುವುದು ಒಂದು ರೀತಿ ಜೀವನದ ಭಾಗವಾಗಿ ಹೋಗಿತ್ತು. ಆಗ ದಿಕ್ಸೂಚಿಯಲ್ಲಿ ಬೇದ್ರೆ ಮಂಜುನಾಥ್ ಬರೆದ ಅನೇಕ ಲೇಖನಗಳನ್ನು ಓದಿದ್ದೆ. ಆದರೆ ಅವರನ್ನು ನೋಡಿರಲಿಲ್ಲ. ಮಾತನಾಡಿರಲಿಲ್ಲ. ಡಿಗ್ರಿ ಓದುವಾಗ ಅವರ ಲೇಖನಗಳನ್ನು ಓದಿ ಮಾತನಾಡಿಸಿ ಪರಿಚಯ ಮಾಡಿಕೊಳ್ಳಬೇಕೆಂದಿದ್ದೆ. ಆಗಿರಲಿಲ್ಲ. ಆಗಿನ್ನೂ ನಾನು ಪತ್ರಕರ್ತನೂ ಆಗಿರಲಿಲ್ಲ. ಆಗುತ್ತೇನೆ ಅಂತ ಅಂದುಕೊಂಡೂ ಇರಲಿಲ್ಲ.
ಅವರ ಪರಿಚಯವಾಗಿದ್ದು ವಿಜಯ ಕನಾಱಟಕ ಸೇರಿದ ಮೇಲೆ. ಒಂದು ವರ್ಷ ಬಿಜಾಪುರದಲ್ಲಿ ಕೆಲಸ ಮಾಡಿದ ನಂತರ, 2003ರ ಜನವರಿಯಲ್ಲಿ ದಾವಣಗೆರೆ ಜಿಲ್ಲಾ ವರದಿಗಾರನಾಗಿ ವಗಾಱವಣೆಯಾಗಿತ್ತು. ಚಿತ್ರದುರ್ಗಕ್ಕೆ ಬಂದು ರಿಪೋಟ್ ಱ ಮಾಡಿಕೊಂಡೆ. ಎರಡು ದಿನಗಳ ನಂತರ ಬೆಳಿಗ್ಗೆ 10 ಗಂಟೆ ಹೊತ್ತಿಗೆ ಚಿತ್ರದುರ್ಗದ ವಿಜಯ ಕನಾಱಟಕದ ಗೆಳೆಯರಿದ್ದ ಮನೆಯಲ್ಲಿ ನಾನು ಪೇಪರ್ ಓದುತ್ತಿದ್ದೆ. ಚಿತ್ರದುರ್ಗ ಆವೃತ್ತಿ ಮುಖ್ಯಸ್ಥ್ಥರಾಗಿದ್ದ ಸತ್ಯನಾರಾಯಣ್ ನಳಪಾಕದಲ್ಲಿ ತೊಡಗಿದ್ದರು. ಆಗ ಸೀದಾ ಏನ್ ಮಾಡ್ತಿದ್ದಿರಿ ಸರ್? ಎಂದು ಬೇದ್ರೆ ಮಂಜುನಾಥ್ ಒಳ ನಡೆದು ಬಂದಿದ್ದರು. ಇನ್ನೇನು ಸರ್… ಅಡುಗೆ’ ಎಂದರು ಸತ್ಯನಾರಾಯಣ್. ನಂತರ ನನ್ನ ಕಡೆ ತಿರುಗಿ ಪರಿಚಯ ಮಾಡಿಕೊಟ್ಟರು. ಇವರು ಶಿವಪ್ರಸಾದ್. ಬಿಜಾಪುರದಿಂದ ದಾವಣಗೆರೆ ಜಿಲ್ಲಾ ವರದಿಗಾರರಾಗಿ ಬಂದಿದ್ದಾರೆ ಎಂದು ಪರಿಚಯಿಸಿದರು. ನಿಮ್ಮ ಬಗ್ಗೆ ಕೇಳಿದ್ದೆ. ನಿಮ್ಮ ಬರಹ ಓದಿದ್ದೆ. ಆದರೆ ಭೇಟಿ ಮಾಡ್ತಿರೋದು ಇದೇ ಮೊದಲು ಎಂದು ಪರಿಚಯ ಮಾಡಿಕೊಂಡೆ.
ಅಲ್ಲಿಂದ ಆರಂಭವಾದ ನಮ್ಮ ಸ್ನೇಹ ಇಂದಿಗೂ ಮುಂದುವರೆದಿದೆ. ದಾವಣಗೆರೆಗೆ ಅವರು ಬಂದಾಗ, ಅಥವಾ ನಾನು ಚಿತ್ರದುರ್ಗಕ್ಕೆ ಹೋದಾಗ ಒಬ್ಬರನ್ನೊಬ್ಬರು ಭೇಟಿ ಮಾಡದೇ ಹೋದ ದಿನಗಳು ಬಹು ಕಡಿಮೆ. ನಾನಂತೂ ಪ್ರತಿಸಾರಿ ಅವರ ಬಳಿ ಹೋದರೆ ಏನಾದರೂ ಹೊಸ ವಿಷಯ ತಿಳಿದೇ ತಿಳಿಯುತ್ತದೆ. ಅಥವಾ ಹಾಗೆ ಮಾಡಬೇಕು. ಹೀಗೆ ಮಾಡಬಹುದು ಎಂದು ಏನಾದರು ಹೊಸ ಐಡಿಯಾ, ಯೋಜನೆ ಬಗ್ಗೆ ಮಾತನಾಡುತ್ತಿದ್ದರು. ಯಾವುದೋ ಒಂದು ಸಮಸ್ಯೆಯನ್ನೋ, ವಿಷಯವನ್ನೋ ಮುಂದಿಟ್ಟು ಏನಾದ್ರೂ ಮಾಡ್ಬೇಕು ಸಾರ್ ಅನ್ನುತ್ತ ಕೆಲಸ ಮಾಡಲು ಪ್ರೇರೇಪಿಸುತ್ತಿದ್ದರು. (ನಾನು ಚಿಕ್ಕವನಿದ್ದರೂ ಅವರು ಕರೆಯುವುದು ಸಾರ್ ಅಂತಲೇ! ನನಗೆ ಅಂತಲ್ಲ. ಅವರಿಗಿಂತ ಚಿಕ್ಕವರಾಗಿರುವ ಅನೇಕರನ್ನು ಅವರು ಸಾರ್ ಎಂದೇ ಮಾತನಾಡಿಸುತ್ತಾರೆ.)
ಚಿತ್ರದುರ್ಗದಲ್ಲಿ ಮಿತ್ರರಿದ್ದ ಮನೆಯ ಹಿಂದೆಯೇ ಅವರೊಂದು ಮನೆ ಕಟ್ಟಿಸಿಕೊಂಡಿದ್ದರು. ಅದರಲ್ಲಿ ಅವರ ಸಾವಿರಾರು ಪುಸ್ತಕಗಳ ಬೃಹತ್ ಭಂಡಾರ. ಒಂದು ಮಲ್ಟಿಮೀಡಿಯಾ ಇಂಗ್ಲಿಷ್ ಲ್ಯಾಬ್. ಅದನ್ನೆಲ್ಲ ಪ್ರಥಮ ಭೇಟಿಯಲ್ಲಿ ತೋರಿಸಿದ್ದರು. ಆಗಲೇ ಅವರ ಸ್ಕೂಲ್ ಡೈರಿ ಎಂಬ ಪುಸ್ತಕ ನೋಡಿದ್ದು. ಅದನ್ನು ನೋಡಿದಾಗ ಎಷ್ಟು ಸರಳವಾಗಿ ನಾವು ಭಾಗವಹಿಸುವ, ಕೇಳುವ, ವಿವಿಧ ವಿಶೇಷ ದಿನಗಳ ಬಗ್ಗೆ ಅವರು ಬರೆದಿದ್ದಾರೆ ಅನ್ನಿಸಿತ್ತು. ನಾನೂ ಏಕೆ ಆ ರೀತಿ ಏನಾದರೂ ಪುಸ್ತಕ ಬರೆಯಬಾರದು ಎಂಬ ಸಣ್ಣ ಆಸೆ ಆ ಪ್ರಥಮ ಭೇಟಿಯಲ್ಲಿ ಮನಸ್ಸಲ್ಲೇ ಮೂಡಿತ್ತು.
ನಂತರ ಒಂದೊಂದಾಗಿ ಅವರು ಬರೆದ ಪುಸ್ತಕಗಳನ್ನು ನೋಡುತ್ತಾ ಹೋದ ಹಾಗೆ, ಇವರೇನು ಮನುಷ್ಯರೋ, ದೈತ್ಯರೋ?? ಸರಕಾರಿ ಕೆಲಸದ ನಡುವೆ, ಮಕ್ಕಳನ್ನು ಬೆಳೆಸುವ ಜವಾಬ್ದಾರಿ ಜೊತೆಗೆ ಯಾವಾಗ ಟೈಮು ಮಾಡಿಕೊಳ್ಳುತ್ತಾರೆ? ಯಾವಾಗ ಬರೆಯುತ್ತಾರೆ ಎಂದು ಚಿಂತಿಸಿದ್ದೆ. ಒಬ್ಬ ಮನುಷ್ಯನನ್ನು ಆರಂಭದಲ್ಲೇ ನಿವೃತ್ತ ಜೀವನಕ್ಕೆ ನೂಕಿ ಬಿಡಲು, ಅಥವಾ ಆತನ ಕ್ರಿಯಾಶೀಲತೆ ಕೊಂದು ಬಿಡಲು ಸರಕಾರ ನೌಕರಿ ಒಂದೇ ಸಾಕು. ಆದರೆ ಅದರಲ್ಲಿದ್ದರೂ ಇತರರನ್ನು ನಾಚಿಸುವ ಕ್ರಿಯಾಶೀಲತೆ ಬೇದ್ರೆ ಅವರದ್ದು.
* * *
ಇಷ್ಟೆಲ್ಲಾ ಜಂಜಾಟಗಳ ನಡುವೆ ಬೇದ್ರೆ ಬರೆದ ಪುಸ್ತಕಗಳ ಸಂಖ್ಯೆ 50 ದಾಟಿದೆ. ಅವರು ನವ ಕನಾಱಟಕ ಪ್ರಕಾಶನದ ಖಾಯಂ ಬರಹಗಾರರು. ಅವರು ಬರೆದ ಪುಸ್ತಕಗಳಲ್ಲಿ ಭಾಷಾ ಆಟಗಳು, ಅಪ್ಲೈಡ್ ಇಂಗ್ಲಿಷ್ ಕೋಸ್್ (ಭಯಂಕರವಾಗಿ ಮಾರಾಟವಾಗುತ್ತಿರುವ ಈ ಪುಸ್ತಕ ಇನ್ನೇನು 20 ನೇ ಮುದ್ರಣಕ್ಕೆ ಸಜ್ಜಾಗುತ್ತಿದೆ), ವಡಱ ಪವರ್, ಲಾಂಗ್ವೇಜ್ ಲ್ಯಾಬ್, ಒನ್ ಮಿನಿಟ್ ಇಂಗ್ಲೀಷ್ ಹೀಗೆ ಹನುಮಂತನ ಬಾಲದಂತೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಆರಂಭದ ದಿನಗಳಲ್ಲೇ ಎರಡು ಕವನ ಸಂಕಲನಗಳನ್ನು ಹೊರ ತಂದಿದ್ದರು. ಅವರ ಬರಹಗಳನ್ನು ನೋಡುತ್ತಾ ಹೋದರೆ ಅದರಲ್ಲಿ ಪ್ರೀತಿ, ಪ್ರೇಮ, ಪ್ರಣಯ ಅಥವಾ ಇನ್ನಾವುದೋ ಕೆಲಸಕ್ಕೆ ಬಾರದ ಭಾವನಾತ್ಮಕ ಅಂಶಗಳ ಬಗ್ಗೆಯೋ, ಟೈಂಪಾಸ್ ಸಾಹಿತ್ಯವನ್ನೋ ಅಥವಾ ಇನ್ನೇನೋ ಸಿಗುವುದಿಲ್ಲ. ಏಕೆಂದರೆ ಅವರ ಬರವಣಿಗೆ ಯಾವಾಗಲೂ ಪ್ರಾಕ್ಟಿಕಲ್. ಅವರ ಪುಸ್ತಕಗಳು ಒಂದು ರೀತಿ ಜ್ಞಾನ ಭಂಡಾರ. ಅಂದಂದಿನ ಬೆಳವಣಿಗೆಗಳನ್ನು ತಮ್ಮ ಬರಹಗಳಲ್ಲಿ ಬಳಸುವ ಕಲೆ ಅವರಿಗೆ ಕರಗತ. ಮಕ್ಕಳು, ಹಾಗೂ ವಿಶೇಷವಾಗಿ ಯುವಕರು ಹಾಗೂ ಶಿಕ್ಷಕ-ಶಿಕ್ಷಕಿಯರು ಅವರ ಬರವಣಿಗೆಗಳ ಗುರಿ. ಅವರನ್ನು ಮುಟ್ಟಿದರೆ, ತಟ್ಟಿದರೆ, ನಿದ್ದೆಯಿಂದ ಎಚ್ಚರಿಸಿದರೆ, ಇಡೀ ಸಮಾಜವನ್ನು ಹೊಸ ದಿಕ್ಕಿಗೆ ಒಯ್ಯಬಹುದು ಎಂಬ ನಂಬಿಕೆ ಅವರದ್ದು.
* * *
ಇಂತಹ ಬೇದ್ರೆ ಮಂಜುನಾಥ್ ಅವರ ಖಾಸಗಿ ಬದುಕಿನ ಬಗ್ಗೆ, ಅವರು ಎಷ್ಟು ಕಷ್ಟಪಟ್ಟು ಮೇಲೆ ಬಂದರು ಎಂದು ಅನೇಕರಿಗೆ ಗೊತ್ತಿಲ್ಲ.
ಅವರು ಹುಟ್ಟಿದ್ದು 1967ರ ಜೂನ್ 10 ರಂದು. ಹುಟ್ಟಿದಾಗ ಮನೆಯಲ್ಲಿ ತೀವ್ರ ಬಡತನ. ಕಷ್ಟ ಅಷ್ಟಕ್ಕೇ ನಿಲ್ಲಲಿಲ್ಲ. ಬೇದ್ರೆ ಕೇವಲ 6 ವರ್ಷದವರಾಗಿದ್ದಾಗ ತಮ್ಮ ತಂದೆಯನ್ನು ಕಳೆದುಕೊಂಡಿದ್ದರು. ಬೇದ್ರೆ ಅವರ ತಾಯಿ, ಪುಟ್ಟ ಬಡ ಮಕ್ಕಳಿಗೆ ನರ್ಸರಿ ನಡೆಸುತ್ತಿದ್ದರು. ಇಡೀ ಕುಟುಂಬದ ಜವಾಬ್ದಾರಿ ಅವರ ಹೆಗಲಿಗೆ. ಬಡ ಮಕ್ಕಳಿಗೆ ನರ್ಸರಿ ನಡೆಸುತ್ತಿದ್ದರಿಂದ ಆದಾಯವೇನೂ ಇಲ್ಲ. ಹೀಗಾಗಿ ಬೇದ್ರೆ ಅತಿ ಚಿಕ್ಕ ವಯಸ್ಸಿನಲ್ಲೇ ಕೆಲಸಕ್ಕೆ ಕೊರಳೊಡ್ಡಬೇಕಾಯ್ತು. ಆದರೆ ಅವರ ಬದುಕನ್ನು ರೂಪಿಸಲು, ಸ್ಪಷ್ಟ ಚಿಂತನೆ, ವ್ಯಕ್ತಿತ್ವ ಬೆಳೆಸಿಕೊಳ್ಳಲು ಇದೇ ಸಹಕಾರಿಯಾಯ್ತು!
ಆರಂಭದಲ್ಲಿ ಕೆಲ ದಿನ ಮನೆ ಮನೆಗೆ ಹೋಗಿ ನ್ಯೂಸ್ ಪೇಪರ್ ಹಂಚಿ ಬರುವ ಪೇಪರ್ ಬಾಯ್ ಆಗಿದ್ದರು. ನಂತರ ಕೆಲ ವರ್ಷ ವೈದ್ಯರೊಬ್ಬರ ಕ್ಲಿನಿಕ್ನಲ್ಲಿ ವಾಡಱಬಾಯ್ ಆಗಿದ್ದರು. ಅವರ ತಾಯಿ ಹೇಳುವಂತೆ ಬೇದ್ರೆ ಮನೆಯಿಂದ ನಯಾ ಪೈಸೆ ಕೇಳದೆ ತಮ್ಮ ಓದನ್ನು ಪೂರೈಸಿದ್ದರು. 1987-89 ರ ಅವಧಿಯಲ್ಲಿ ತಮ್ಮದೇ ಖಚಿಱನಲ್ಲಿ ಇಂಗ್ಲಿಷ್ ಎಂ.ಎ. ಪೂತಿಱಗೊಳಿಸಿದರು. ಆ ವಿಷಯದಲ್ಲಿ ಅಂದಿಗೂ, ಇಂದಿಗೂ ಬೇದ್ರೆ ಯಾರ ಬಳಿಯೂ ಕೈ ಒಡ್ಡಿಲ್ಲ. ಇಂದು ಪಾಕೆಟ್ ಮನಿಗೆ ಕೈಯೊಡ್ಡುವ ನಮ್ಮ ಮಕ್ಕಳಿಗೆ ಬೇದ್ರೆಯವರ ಬಾಲ್ಯ, ಓದು ಪ್ರೇರಣೆಯಾಗಬಹುದು.
ಪುಸ್ತಕ ಬರೆಯುವ ಕಲೆ ಬೇದ್ರೆ ಅವರಿಗೆ ಚನ್ನಾಗಿ ಸಿದ್ಧಿಸಿತ್ತು. ಅವರು ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಬಿ.ಎ. ಓದುವಾಗಲೇ ಇಂಗ್ಲೀಷ್ ಗ್ರಾಮರ್ ಬಗ್ಗೆ ಪುಸ್ತಕ ಪ್ರಕಟಿಸಿದ್ದರು. ಆ ಪುಸ್ತಕವೇ 10 ಬಾರಿ ಮರು ಮುದ್ರಣವಾಯ್ತು! ಇಡೀ ಕುವೆಂಪು ವಿವಿಗೆ ಬೇದ್ರೆ ಇತಿಹಾಸದಲ್ಲಿ ಪ್ರಥಮರಾಗಿ ಹೊಮ್ಮಿದರು. ಇಂಗ್ಲೀಷ್ನಲ್ಲಿ ಎಂ.ಎ.ಮಾಡಲು ಬಯಸಿದ್ದ ಅವರು, ಮೈಸೂರಿಗೆ ತೆರಳಿದರು. ಎಂ.ಎ.ಮುಗಿದ ನಂತರ ಡಿವಿಎಸ್ ಕಾಲೇಜಿನಲ್ಲಿ ಅರೆಕಾಲಿಕ ಉಪನ್ಯಾಸಕರಾಗಿ ಸೇವೆ. ನಂತರ ಆಲ್ ಇಂಡಿಯಾ ರೇಡಿಯೋದ ಉದ್ಯೋಗ ದೊರೆಯಿತು. 1991 ರಿಂದ ಚಿತ್ರದುರ್ಗದಲ್ಲಿ ಅವರ ಸೇವೆ ಮುಂದುವರೆದಿದೆ.
* * *
ಬೇದ್ರೆ ಇದ್ದಲ್ಲಿ ಒಂದು ಹುಡುಗರ ಗುಂಪು ಇರಲೇಬೇಕು. ಅಲ್ಲಿ ಏನಾದರೂ ಚಚೆಱ ನಡೆಯಲೇ ಬೇಕು. ತಮ್ಮ ಬಹುತೇಕ ಸಮಯವನ್ನು ಶಾಲಾ ಮಕ್ಕಳು, ಯುವಕರು ನಡುವೆ, ತಮ್ಮ ಬರವಣಿಗೆಯ ನಡುವೆ ಹಾಗೂ ಹಳೆಯ ತಲೆಮಾರಿಗೆ ಸೇರಿದ ಹಿರಿಯರ ನಡುವೆ ಕಳೆಯುತ್ತಾರೆ. ಬೆಳಗೆರೆ ಕೃಷ್ಣಶಾಸ್ತ್ರಿಗಳಂತಹವರೂ ಸಹ ಬೇದ್ರೆ ಅಪ್ತರ ಪಟ್ಟಿಯಲ್ಲಿದ್ದಾರೆ.
ಬೇದ್ರೆ ಶಿವಮೊಗ್ಗದಲ್ಲಿ ಇದ್ದಾಗಲೇ ಯುವಕರನ್ನು ಸಂಘಟಿಸಿ, ಆರೋಗ್ಯಕರ ಚಿಂತನೆಯತ್ತ ಅವರ ಮನಸ್ಸನ್ನು ಹೊರಳಿಸುವುದರ ಪ್ರಾಮುಖ್ಯತೆ, ಇದಕ್ಕಾಗಿ ಯೂತ್ ಕ್ಲಬ್ ಗಳ ಅವಶ್ಯಕತೆ ಅರಿತಿದ್ದರು. ಶಿವಮೊಗ್ಗದಲ್ಲಿದ್ದಾಗ ‘ಶಿವಮೊಗ್ಗ ಕ್ವಿಜ್ ಮತ್ತು ಅಡ್ವೆಂಚರ್ ಕ್ಲಬ್ ಅವರ ಚಟುವಟಿಕೆಗಳ ಕೇಂದ್ರ. ಈ ಕ್ಲಬ್ನಿಂದ ಹೊರ ಹೊಮ್ಮಿದ ಪ್ರತಿಭೆ ಸತ್ಯಪ್ರಕಾಶ್. ಇವರು ಮುಂದೆ ಯುಪಿಎಸ್ಸಿ ಪರೀಕ್ಷೆಯಲ್ಲಿ ದೇಶಕ್ಕೇ ದ್ವಿತೀಯ ಸ್ಥಾನ ಪಡೆದು, ಈಗ ಹರಿಯಾಣಾದಲ್ಲಿ ಐಎಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕೆಲ ದಿನಗಳ ಹಿಂದೆ ಅವರು ಚಿತ್ರದುರ್ಗಕ್ಕೆ ಆಗಮಿಸಿದ್ದಾಗ ಅಲ್ಲಿ ಬೇದ್ರೆ ನಡೆಸುತ್ತಿರುವ ಯೂತ್ ಕ್ಲಬ್ ಗೆ ಹೋಗಿ, ಅಲ್ಲಿದ್ದ ಯುವಕರೊಂದಿಗೆ ಸಂವಾದ ನಡೆಸಿದ್ದರು. ಆಗ ಅವರು ಹೇಗೆ ಶಿವಮೊಗ್ಗದಲ್ಲಿದ್ದ ಕ್ಲಬ್ ತಮ್ಮ ಐಎಎಸ್ಗೆ ಸಹಕಾರಿಯಾಯ್ತು ಎಂದು ನೆನಪಿಸಿಕೊಂಡಿದ್ದರು.
ಹೀಗೆ ಬೇದ್ರೆ ಗರಡಿಯಿಂದ ಹೊರ ಬಿದ್ದ ಅನೇಕರು ಇಂದು ಐಎಎಸ್, ಐಪಿಎಸ್, ಕೆಎಎಸ್, ಪಿಎಸ್ಐ, ಎಫ್ಡಿಎ, ಎಸ್ಡಿಸಿಗಳಾಗಿ ಹಾಗೂ ಖಾಸಗಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಬೇದ್ರೆ ಕನಾಱಟಕ ಪತ್ರಿಕೋದ್ಯಮಕ್ಕೆ ಕೇವಲ ತಮ್ಮ ಬರವಣಿಗೆ ಮೂಲಕ ಕೊಡುಗೆ ನೀಡಿಲ್ಲ. ಅನೇಕ ಯುವ ಪತ್ರಕರ್ತರನ್ನು ಅವರು ಸಜ್ಜುಗೊಳಿಸಿದ್ದಾರೆ. ಇಂದು ಪತ್ರಿಕೋದ್ಯಮದಲ್ಲಿ ಹೆಸರು ಮಾಡುತ್ತಿರುವ ಕನ್ನಡಪ್ರಭದಲ್ಲಿರುವ ಕುಮಾರ್, ಮಂಜುನಾಥ್ ಸ್ವಾಮಿ, ಡೆಕ್ಕನ್ ಹೆರಾಲ್ಡ್ ನಲ್ಲಿರುವ ಸತೀಶ್ ಶಿಲೆ, ಇಂತಹ ಅನೇಕ ಪತ್ರಕರ್ತರು ಬೇದ್ರೆ ನೀಡಿದ ಕೊಡುಗೆ. ಕನ್ನಡವನ್ನು ಪ್ರೀತಿಸುವುದರ ಜೊತೆಗೇ ಇಂಗ್ಲೀಷ್ ಭಾಷೆಯ ಅನಿವಾರ್ಯತೆಯ ಅರಿವೂ ಅವರಿಗಿದೆ. ಹೀಗಾಗಿ ಅವರು ಇಂದಿಗೂ ಯುವಕರಿಗೆ ಇಂಗ್ಲಿಷ್ ತರಬೇತಿ ನೀಡುತ್ತಾರೆ. 1997 ರಲ್ಲೇ ಅವರು 150 ನೇ ಬ್ಯಾಚ್ಗೆ ತರಬೇತಿ ನೀಡಿದ್ದರು. ಹೀಗಾಗಿ ಈಗ ಬಹುತೇಕ 500 ಕ್ಕೂ ಹೆಚ್ಚು ಬ್ಯಾಚ್ಗಳಿಗೆ ಅವರು ತರಬೇತಿ ನೀಡಿದ್ದಾರೆ.
* * *
ಬೇದ್ರೆ ಅಷ್ಟೇ ನಿಷ್ಟುರ ಮನಸ್ಸಿನವರು. ತಮಗೆ ಸರಿಹೋಗದ್ದನ್ನು ನೇರವಾಗಿ ಹೇಳಲು ಅಥವಾ ‘ನೋ’ ಎಂದು ಹೇಳಲು ಎಂದಿಗೂ ಹಿಂಜರಿದವರಲ್ಲ. ಎಂತಹವರನ್ನೂ ತರಾಟೆಗೆ ತೆಗೆದುಕೊಳ್ಳದೆ ಬಿಟ್ಟಿಲ್ಲ. ಉತ್ತಮ ಪುಸ್ತಕಗಳನ್ನು ಚನ್ನಾಗಿದೆ ಎಂದು ವಿಮಶೆಱ ಬರೆಯುವ ಅವರು, ಕೆಟ್ಟ ಪುಸ್ತಕಗಳು ಬಂದಾಗ ಸರಿಯಾಗಿ ಝಾಡಿಸುತ್ತಾರೆ. ಕನ್ನಡದ ಬಹುತೇಕ ಎಲ್ಲಾ ಪತ್ರಿಕೆ, ಪೇಪರ್ಗಳಲ್ಲಿ ಅವರ ಬರಹಗಳು ಪ್ರಕಟಿತವಾಗಿವೆ. ಇಂದಿಗೂ ತಮ್ಮೆಲ್ಲಾ ಕೆಲಸಗಳ ನಡುವೆ ಪುಸ್ತಕ ವಿಮಶೆಱ ಮಾಡುತ್ತಾರೆ. ಹೊಸ ಲೇಖನ ಬರೆಯುತ್ತಾರೆ. ಒಂದಿಡೀ ಯುವಕರ ಗುಂಪನ್ನು ಪ್ರೇರೇಪಿಸುತ್ತಾರೆ. ಅವರನ್ನು ಕಟ್ಟಿಕೊಂಡು ಚಾರಣಕ್ಕೋ, ಅಧ್ಯಯನ ಪ್ರವಾಸಕ್ಕೋ, ಸಾಹಸ ಕ್ರೀಡೆಗೋ ಹೋಗಿ ಬಿಡುತ್ತಾರೆ. ಎಲ್ಲಿಯೂ ಪ್ರಚಾರ ಬಯಸಿಲ್ಲ. ರಾಜಕಾರಿಣಿಗಳನ್ನು ಕಂಡರೆ ಅಷ್ಟಕ್ಕಷ್ಟೇ! ಕೆಲಸಕ್ಕೆಂದೂ ಮೋಸ ಮಾಡಿದವರಲ್ಲ. ಬಿಡುವಿನ ವೇಳೆಯಲ್ಲಿ ಸೋಮಾರಿಯಾಗಿ ಸಮಯ ಕಳೆದು ನಮ್ಮಂತೆ ಸಮಯಕ್ಕೆ ದ್ರೋಹ ಬಗೆದವರು ಅಲ್ಲ. ಅವರನ್ನು ಬಿಡುವಾಗಿ ನೋಡಿದವರೇ ಅಪರೂಪ. ಅವಶ್ಯಕತೆಗಿಂತ ಹೆಚ್ಚು ಮಾತಿಲ್ಲ. ಒಣ ಹರಟೆ ಅವರಿಗೆ ಬೇಕಿಲ್ಲ. ಹರಟೆಯಲ್ಲೂ ಏನಾದರೂ ಹುರುಳಿರಬೇಕು. ಲೋಕದಾ ಡೊಂಕ ನೀವೇಕೆ ತಿದ್ದುವಿರಿ? ನಿಮ್ಮ ನಿಮ್ಮ ಡೊಂಕ ನೀವು ತಿದ್ದಿಕೊಳ್ಳಿ ಎಂಬ ಕವಿವಾಣಿಯ ತತ್ವ ಅವರದ್ದು. ಮನಸ್ಸೇ ರಿಲ್ಯಾಕ್ಸ್ ಪ್ಲೀಸ್ ಎನ್ನುವ ಸ್ವಭಾವ ಅವರದ್ದಲ್ಲ. ಮನಸ್ಸೇ ಡೋಂಟ್ ರಿಲ್ಯಾಕ್ಸ್ ಪ್ಲೀಸ್ ಎಂಬ ಹಠ ಅವರದ್ದು. ಇರುವುದೊಂದೇ ಜೀವನ. ಅದನ್ನು ಸಾರ್ಥಕ ಪಡಿಸಿಕೊಳ್ಳಲು ಮನಸ್ಸನ್ನು ಸರಿಯಾಗಿ ಬಳಸಿ, ಕ್ರಿಯಾಶೀಲವಾಗಿಡಬೇಕು. ರಿಲ್ಯಾಕ್ಸ್ ಆಗಿ, ಸೋಮಾರಿಗಳಾಗಬಾರದು ಎಂಬ ಆಶಾಭಾವ ಅವರದ್ದು.
ಹೀಗಾಗಿ ಬೇದ್ರೆ ಸ್ವಭಾವ ಅವರ ಹತ್ತಿರಕ್ಕೆ ಹೋಗದವರಿಗೆ ಒಂದು ದೊಡ್ಡ ಪ್ರಶ್ನಾರ್ಥಕ ಚಿಹ್ನೆ.
* * *
ದುರ್ಗದಂತಹ ಊರಿನಲ್ಲಿದ್ದುಕೊಂಡೇ, ಅನೇಕ ಅಸಾಧ್ಯಗಳನ್ನು ಸಾಧ್ಯವಾಗಿಸಿದ ಬೇದ್ರೆ ಅವರನ್ನು ಜಿಲ್ಲೆಯ ಶೈಕ್ಷಣಿಕ ಸಮುದಾಯ ಅಷ್ಟು ಸಮರ್ಪಕವಾಗಿ ಬಳಕೆ ಮಾಡಿಲ್ಲ. ಅವರ ದೈತ್ಯ ಶಕ್ತಿ ಆಕಾಶವಾಣಿಯೊಂದೇ ಬಳಸಿಕೊಳ್ಳಲಿ ಎಂದು ಜಿಲ್ಲೆಯ ಪ್ರಜ್ಞಾವಂತರು, ಶಿಕ್ಷಕರು, ಅನೇಕ ವಿದ್ಯಾಥರ್ಿಗಳು ಭಾವಿಸಿದಂತಿದೆ. ಈ ಎಲ್ಲರೂ ತಮ್ಮ ಸೋಮಾರಿತನ ಬಿಟ್ಟು ಬೇದ್ರೆ ಬೆನ್ನು ಬಿದ್ದಲ್ಲಿ, ಅವರಿಂದ ಇನ್ನೂ ಅನೇಕ ಅಮೋಘ, ಅದ್ಭುತ ಕೆಲಸಗಳನ್ನು ಮಾಡಿಸಬಹುದು. ಅವರನ್ನು ಸದುಪಯೋಗ ಪಡಿಸಿಕೊಳ್ಳುವ ಸೌಭಾಗ್ಯ ಚಿತ್ರದುರ್ಗಕ್ಕೆ, ಕನ್ನಡ ಪತ್ರಿಕೋದ್ಯಮಕ್ಕೆ, ಯುವಕರಿಗೆ ದೊರೆಯಲಿ.
* * *
ಇಂತಹ ಬೇದ್ರೆ ಅವರಿಂದ ನಾನಂತೂ ಸಾಕಷ್ಟು ಕಲಿತಿದ್ದೇನೆ. ದೂರದ ದಿಲ್ಲಿಯಲ್ಲಿ ಬಿಡುವಿಲ್ಲದಿದ್ದರೂ, ನಿತ್ಯ ಒಂದು ಸಲವಾದರೂ ಅವರನ್ನು ನೆನಪಿಸಿಕೊಳ್ಳುತ್ತೇನೆ.
ಆದರೆ ಕಲಿಯಬೇಕಾದ್ದು ಇನ್ನೂ ಸಾಕಷ್ಟಿದೆ.
ಈಗ ಹೇಳಿ…
ಇಂತಹ ಕ್ರಿಯಾಶೀಲರನ್ನು ನೋಡಿ, ನಮ್ಮಂತಹ ಸೋಮಾರಿಗಳಿಗೆ ಹೊಟ್ಟೆ ಕಿಚ್ಚು ಆಗುತ್ತದೋ ಇಲ್ಲವೋ?
ನಾವು ಅವರಂತೆ ಕ್ರಿಯಾಶೀಲರಾಗುವುದು ಯಾವಾಗ??

Advertisements
Published in: on ಆಗಷ್ಟ್ 14, 2008 at 12:27 ಫೂರ್ವಾಹ್ನ  Comments (10)  

ಗಣಿ ದೇಣಿಗೆಯೂ,… ಬಣ್ಣದ ಸೀರೆಯೂ..

ಸಂಡೇ ಇಂಡಿಯನ್ ಗೆಳೆಯ ಶಶಿ ಸಂಪಳ್ಳಿ ತನ್ನ ಬ್ಲಾಗ್ನಲ್ಲಿ ತನ್ನ ಚುನಾವಣಾ ಅನುಭವ ಬರೆಯುತ್ತಿದ್ದಾರೆ. ಗಣಿ ದೇಣಿಗೆಯೂ, ಬಣ್ಣದ ಸೀರೆಯೂ ಎಂಬ ಬರಹ ಇಂಟರೆಸ್ಟಿಂಗ್ ಆಗಿದೆ. ಹಾಗಾಗಿ ಅದನ್ನು ನೇರವಾಗಿ ಮತ್ತೊಮ್ಮೆ ಇಲ್ಲಿ ಪ್ರಕಟಿಸುತ್ತಿದ್ದೇನೆ. ಅದರ ಕೆಳಗೇ ನಾನು ಶಶಿಗೆ ಕಳುಹಿಸಿದ ಪ್ರತಿಕ್ರಿಯೆ ಕೂಡಾ ಇದೆ. ಆಸಕ್ತರು www.shashisampalli.wordpress.com ಗೆ ಭೇಟಿ ನೀಡಬಹುದು.
* * *
ಗಣಿ ದೇಣಿಗೆಯೂ,… ಬಣ್ಣದ ಸೀರೆಯೂ..:

ಆ ಊರಿನಲ್ಲಿ ಅವತ್ತು ಚುನಾವಣಾ ಪ್ರಚಾರ ಸಭೆ ನಡೆಯುವುದಿತ್ತು. ಗಣಿ ದಣಿಯೊಬ್ಬರು ಎಂಎಲ್ಎ ಯಾಗಿ ಹೋಗಲು ಆ ಊರನ್ನೇ ಆಯ್ಕೆಮಾಡಿಕೊಂಡಿದ್ದರು. ಹಾಗಾಗಿ ಸಹಜವಾಗಿಯೇ ಇಡೀ ಊರಿನ ತುಂಬ ವಿಚಿತ್ರ ಹುಮ್ಮಸ್ಸು ಕಾಣುತ್ತಿತ್ತು. ಚುನಾವಣಾ ಸಮೀಕ್ಷೆಗೆ ಹೋದ ನಾವು, ಸಹಜವಾಗಿ ರಸ್ತೆ, ಹೋಟೆಲ್, ಬೀಡಾ ಅಂಗಡಿ, ರೈತರು, ಕೂಲಿಕಾರ್ಮಿಕರನ್ನು ಮಾತನಾಡಿಸತೊಡಗಿದೆವು.
ಈ ಸಾರಿ ಬಿಡ್ರಿ ಸರ, ದುಡ್ಡು ಚೆಲ್ಲಾಡತೈತಿ,.. ಇನ್ನೂ ಚುನಾವಣಿ ಏಳೆಂಟು ದಿನ ಐತ್ರಿ, ಈಗಲೇ ಅವರು ಕರ್ಚು ಮಾಡಿದ್ದು ಏನಿಲ್ಲಂದ್ರೂ 20 ಕೋಟಿ ಮೀರಿರಬೈದ್ರಿ.. ಅಂದ ಬಾರ್ ಒಂದರ ಎದುರಿನ ಬೀಡಾ ಅಂಗಡಿಯಾತ. ಹೇಳಿಕೇಳಿ ಬಾರ್ ಎದುರಿನ ಬೀಡಾ ಅಂಗಡಿ ಎಂದರೆ ಅದು ಎಲ್ಲಾ ಸತ್ಯಗಳಿಗೆ ತುಸು ಹತ್ತಿರದ ಮೂಕಸಾಕ್ಷಿ! ಇರಬಹುದು ಎಂದುಕೊಂಡು ಮುಂದುವರಿದೆವು.
ಬಸ್ ನಿಲ್ದಾಣದಲ್ಲಿ ಹಳ್ಳಿಗೆ ಹೋಗಲು ಬಸ್ಸಿಗಾಗಿ ಕಾದು ನಿಂತಿದ್ದ ರೈತನೊಂದಿಗೆ ಮಳೆ- ಬೆಳಿ ವಿಚಾರ ಮಾತಾಡುತ್ತಾ, ನಮ್ಮ ದಾರಿಗೆ ಎಳೆದುಕೊಂಡೆವು. ಚುನಾವಣೆ ಬಿಗಿ ಐತ್ರಿ, ನನ್ ಜನ್ಮದಾಗೇ ಇಷ್ಟೊಂದು ದುಡ್ಡು, ಭರಾಟೆ ಕಂಡಿದ್ದಿಲ್ರಿ ಎಂದರು ಯಜಮಾನರು. ಸರಿ, ಏನಕ್ಕೆ ಕರ್ಚು ಮಾಡ್ತಾರ್ರಿ, ಆಯೋಗ ಈ ಬ್ಯಾನರು, ಕಟೌಟ್ ಹಾಕೋಂಗಿಲ್ಲ ಅಂದೈತಲ್ರಿ ಎಂದು ಹಣ ಹರಿಯುವ ದಾರಿಗಳ ಶೋಧನೆಗೆ ಚಾಲನೆ ಕೊಟ್ಟೆವು (ಮೊದಲೇ ಗೊತ್ತಿದ್ದರೂ ಕುತೂಹಲಕ್ಕಾಗಿ). ಆಗ ಅವರು, ಅಯ್ಯೋ ಆಯೋಗ ಮಾಡಿದ್ದು ಅಲ್ಲೇ ಇರ್ತೈತೆ, ಇವರು ಮಾಡೋದು ಮಾಡ್ತಾರ್ರಿ,.. ಮೊನ್ನೆ ನೋಡ್ರಿ ನಾಮಪತ್ರ ಹಾಕೋ ಸಭೆ ಮಾಡಿದ್ರಲ್ಲ ಆವಾಗ ಕನಿಷ್ಠ ಅಂದ್ರೂ 60 ಟ್ರ್ಯಾಕ್ಟರ್ ಜನ ಬಂದಿದ್ರಿ, ಒಂದೊಂದು ಟ್ರ್ಯಾಕ್ಟರಿಗೆ 10-12 ಸಾವಿರ ಕೊಟ್ಟಾರಿ, ಹಂಗೇ ಜೀಪು, ಕಾರು, ಬಸ್ ಬ್ಯಾರೆ ಲೆಕ್ಕಾರಿ, ಮತ್ತೆ ಹಳ್ಳಿಗಳಿಗೆ ಎಲ್ಲಾ ಮಹಿಳಾ ಸಂಘ, ಹುಡುಗರ ಸಂಘಗೊಳಿಗೆಲ್ಲಾ ತಲಾ ಒಂದೊಂದು ಲಕ್ಷ ಕೊಡ್ತೀವಿ ಅಂದಾರ್ರಿ,.. ಈಗಾಗಲೇ ಅಧ್ಯಕ್ಷರು, ಉಪಾಧ್ಯಕ್ಷರಿಗೆಲ್ಲಾ 10 ಸಾವಿರ ರೂಪಾಯಿ ಸ್ವಂತಕ್ಕೆ ಅಂತ ಕೊಟ್ಟಾರ್ರಿ… ಎಂದರು.
ಅವರ ಮಾತನ್ನ ಕೇಳಿ ನಗುಬಂತು. ನಾವಿದ್ದ ಸ್ಥಿತಿಯಲ್ಲಿ ನಗುವಲ್ಲದೆ ಇನ್ನೇನೂ ವ್ಯಕ್ತಪಡಿಸುವ ಸ್ಥಿತಿ ಇರಲಿಲ್ಲ!
ಮೂರು ವರ್ಷಗಳ ಹಿಂದೇ ಇದೇ ಸ್ತ್ರೀಶಕ್ತಿ ಮತ್ತು ಸ್ವಸಹಾಯ ಸಂಘಗಳ ಬಗ್ಗೆ ವಾರಪತ್ರಿಕೆಯೊಂದಕ್ಕೆ ಲೇಖನ ಮಾಡುತ್ತಾ, ಮೌನಕ್ರಾಂತಿ ಎಂದು ಬಣ್ಣಿಸಿದ್ದೆವು. ಇದೀಗ ಅದೇ ಸಂಘಗಳೇ ಕಳೆದ ಚುನಾವಣೆಯಲ್ಲಿ ಸಾಕಷ್ಟು ಫಲಾನುಭವಿಗಳಾಗಿ ಹೊರಹೊಮ್ಮಿವೆ. ಯಾವ ಸಂಘಗಳು ಮಹಿಳಾ ಸ್ವಾವಲಂಬನೆಯ ವೇದಿಕೆಗಳಾಗಬೇಕಿತ್ತೋ ಅವೇ ಇಂದು ಕೇವಲ ಹಣದ ಆಮಿಷಕ್ಕೆ ಬಿದ್ದು ರಾಜಕೀಯ ಪ್ರಬುದ್ಧತೆ, ಸ್ವಾತಂತ್ರ್ಯವನ್ನು ಹರಾಜಿಗಿಟ್ಟಿವೆ. ಈ ಸಂಘಗಳು ಗ್ರಾಮೀಣ ಮಹಿಳೆಯರಿಗೆ ಒಂದಿಷ್ಟು ವ್ಯವಹಾರಿಕ ಜಾಣ್ಮೆಯನ್ನು ಕಲಿಸಿವೆ, ಕೆಲಮಟ್ಟಿಗೆ (ಕೆಲವಾದರೂ) ಆರ್ಥಿಕವಾಗಿ ಮಹಿಳೆಯರನ್ನು ಸದೃಢಗೊಳಿಸಿವೆ ಎಂಬುದು ನಿಜವಾದರೂ, ರಾಜಕೀಯ ಪಕ್ಷಗಳ ನೈತಿಕ ದಿವಾಳಿತನದ ಪ್ರತೀಕವಾಗಿ ಈ ಸಂಘಗಳೂ ಕೂಡ ಅವರ ಅಸ್ತ್ರಗಳಾಗಿ ಬಳಕೆಯಾಗುತ್ತಿವೆ ಎಂಬುದಕ್ಕೆ ಕಳೆದ ಚುನಾವಣೆ ನಿದರ್ಶನವಾಯಿತು. ಮೊನ್ನೆ ಸದನದಲ್ಲಿ ಕೂಡ ಈ ವಿಷಯ ಪ್ರಸ್ತಾಪವಾಗಿದೆ. ಆದರೆ, ನಮ್ಮ ಶಾಸಕರುಗಳೇ ದುಡ್ಡು ಕೊಟ್ಟು ಸುಸ್ತಾಗಿದ್ದೇವೆ ಎಂದು ಅಲವತ್ತುಕೊಂಡಿರುವುದು ವಿಪರ್ಯಾಸ. ಬಹುಷಃ ಗೆದ್ದವರು ಯಾರೂ ಅದನ್ನು ಹೇಳಿಲ್ಲ!
ಗ್ರಾಮೀಣ ಮಹಿಳೆಯ ಸಂಘಟನೆಯೊಂದು (ಆರಂಭದಲ್ಲೇ ಸಾರಾಯಿ ಮತ್ತು ಮದ್ಯದ ಲಾಬಿಗಳ ಕೈಗೊಂಬೆಗಳಾಗಿ ದಿಕ್ಕುತಪ್ಪಿದ್ದವು ಎಂಬ ಮಾತು ಬೇರೆ) ಹೇಗೆ ರಾಜಕೀಯ ದಾಳವಾಗಿ ಬದಲಾಗುತ್ತದೆ ಎಂಬುದಕ್ಕೆ ನಿದರ್ಶನವಾದಂತೆಯೇ ಈ ಬೆಳವಣಿಗೆ ರಾಜಕೀಯ ಪಕ್ಷಗಳು ಹೇಗೆ ಎಂತಹ ಸಂಘಟನೆಯನ್ನೂ ಹಣಬಲದ ಮೇಲೆ ತಮ್ಮ ಹಿಡಿತಕ್ಕೂ ತೆಗೆದುಕೊಳ್ಳುತ್ತವೆ ಎಂಬುದಕ್ಕೂ ಉದಾಹರಣೆಯಲ್ಲವೇ?
ಹೀಗೆ ಏನೇನೋ ಯೋಚಿಸುತ್ತಿರುವಾಗಲೇ, ಚುನಾವಣಾ ಸಭೆಗಳಲ್ಲಿ ಯೂನಿಫಾರ್ಮನಂತೆ ಒಂದೇ ಬಗೆಯ ಸೀರೆಯುಟ್ಟು ಮುಂದಿನ ಸಾಲುಗಳಲ್ಲಿ ಕೂರುತ್ತಿದ್ದ ನೂರಾರು ಹೆಣ್ಣುಮಕ್ಕಳ ಚಿತ್ರ ನೆನಪಿಗೆ ಬರುತ್ತಿದೆ…. ಹಾಗೇ ಆ ರೈತ ಹೇಳಿದ ಸಂಘಗಳಿಗೆ ಗಣಿ ದಣಿ ನೀಡಿದ ದೇಣಿಗೆ ಕೂಡ…!

ಈ ಬರಹಕ್ಕೆ ನನ್ನ ಪ್ರತಿಕ್ರಿಯೆ:
ಶಶಿ ನೀನು ಹೇಳಿದ್ದು 101% ಸತ್ಯ. ನಿಜಕ್ಕೂ ಈ ಸಾರಿಯ ಚುನಾವಣೆಯಲ್ಲಿ ಸ್ತ್ರೀ ಶಕ್ತಿ ಸಂಘಗಳು ಹೊಸ ‘ಶಕ್ತಿ’ (?) ಕೇಂದ್ರಗಳಾಗಿ ಉದಯಿಸಿವೆ.
ದೆಹಲಿಗೆ ಇತ್ತೀಚೆಗೆ ಬಂದಿದ್ದ ಎಂ.ಪಿ.ಪ್ರಕಾಶ್ ಜೊತೆ ಚಹಾ ಹೀರುತ್ತಾ ಚುನಾವಣೆ ಬಗ್ಗೆ ಮಾತನಾಡುತ್ತಿದ್ದೆವು. ಅವರು ಕುತೂಹಲಕಾರಿ ಘಟನೆ ಹೇಳಿದರು. ಅವರು ಯಾವ ಊರಿಗೆ ಪ್ರಚಾರಕ್ಕೆ ಹೋದರೂ, ನೂರಾರು ಹೆಣ್ಣು ಮಕ್ಕಳು ಸಾಲಾಗಿ ಆರತಿ ತಟ್ಟೆ ಹಿಡಿದುಕೊಂಡು ಬಂದು ಬಿಡುತ್ತಿದ್ದರಂತೆ. ಒಂದೊಂದು ತಟ್ಟೆಗೆ ಏನಿಲ್ಲವೆಂದರೂ 500 ರೂ.ಕಾಣಿಕೆ ಹಾಕಬೇಕು! ಇಲ್ಲದಿದ್ದರೆ ‘ಏನ್ಸಾರ್ ನೀವು… ಅವರು ಬಂದು ಹೋಲ್ ಸೇಲಾಗಿ ಇಷ್ಟು ಕೊಡ್ತಾರೆ. ನೀವು 500 ರೂ.ಕೊಡ್ಲಿಕ್ಕೆ ಮೀನ ಮೇಷ ಏಣಿಸ್ತೀರಲ್ಲ’ ಅಂತ ತರಾಟೆಗೆ ತೆಗೆದುಕೊಳ್ತಿದ್ದರಂತೆ. ಹೀಗಾಗಿ ಪ್ರತಿ ಊರಿನ ಪ್ರತಿ ಹೆಣ್ಣು ಮಕ್ಕಳು ಆರತಿ ತಟ್ಟೆ ಹಿಡಿಯೋದು ಸಾಮಾನ್ಯವಾಗಿತ್ತಂತೆ.
ನಮ್ಮ ರಾಜಕಾರಿಣಿಗಳು ರೂಪಿಸೋ ಎಲ್ಲಾ ಯೋಜನೆಗಳೂ ಒಂದು ರೀತಿ ಭಸ್ಮಾಸುರನಂತಿರುತ್ತವೆ. ಅಧಿಕಾರ ವಿಕೇಂದ್ರೀಕರಣದ ಹೆಸರಲ್ಲಿ ಗ್ರಾಮಗಳಿಗೂ ರಾಜಕೀಯ ಕೊಂಡೊಯ್ದರು. ಇವತ್ತೇನಾಗಿದೆ? ಕಪಟ ಅರಿಯದ ಹಳ್ಳಿಗರು ಪಟ್ಟಣದವರಿಗಿಂತ ಹೆಚ್ಚಾಗಿ ಕಪಟಿಗಳಾಗುತ್ತಿದ್ದಾರೆ. ಗ್ರಾಮ ಪಂಚಾಯಿತಿಗಳಲ್ಲಿ ಇರುವ ರಾಜಕೀಯ ಲೋಕಸಭೆಯಲ್ಲೂ ಇರಲಿಕ್ಕಿಲ್ಲ. ಒಂದಾಗಿ, ಒಗ್ಗಟ್ಟಾಗಿ ಇರುತ್ತಿದ್ದ ಹಳ್ಳಿಗರು ಇಂದು ಆಯಾ ಪಕ್ಷಕ್ಕೆ ಸೇರಿದ ಗುಂಪುಗಳಾಗಿ, ಒಡೆದು ಹೋಗಿದ್ದಾರೆ. ಹೊಡೆದಾಟ – ಮಾರಾಮಾರಿ ಖಾಯಂ. ಇನ್ನು ರೈತರಂತೂ ತಮ್ಮ ಶಕ್ತಿಯನ್ನೇ ಮರೆತು ನರಸತ್ತ ವಸೂಲಿಬಾಜಿ ರೈತ ನಾಯಕರುಗಳ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ. ದಾವಣಗೆರೆಯಲ್ಲಿದ್ದಾಗ ನೀನೇ ನೋಡಿದ್ದೀಯಲ್ಲ ಮಾರಾಯ! ಸೋ ಕಾಲ್ಡ್ ರೈತ ನಾಯಕರುಗಳ ಪ್ರತಾಪಗಳನ್ನು! ಈ ಅಧಿಕಾರ ವಿಕೇಂದ್ರೀಕರಣದಿಂದ ಕೊನೇ ಪಕ್ಷ ಸ್ತ್ರೀಯರು ದೂರ ಇದ್ದರು. ಗ್ರಾಮಗಳ ಆರೋಗ್ಯ ಕಾಪಾಡುವಲ್ಲಿ ಇವರ ಪಾತ್ರ ಪ್ರಮುಖವೂ ಆಗಿತ್ತು.
ಆಗ ಬಂತು ನೋಡು ಸ್ತ್ರೀ ಶಕ್ತಿ ಗುಂಪುಗಳು! 4-5 ವಷಱದಲ್ಲೇ ಸ್ತ್ರೀ ಶಕ್ತಿ ಗುಂಪುಗಳು ತಮ್ಮ ಧ್ಯೇಯೋದ್ದೇಶ ಮರೆತು, ಹೊಸ ದಿಕ್ಕಿಗೆ ‘ಯು’ ಟನಱ್ ಹೊಡೆದಿವೆ. ಬರುವ ಚುನಾವಣೆ ಹೊತ್ತಿಗೆ ಈ ಸ್ತ್ರೀ ಶಕ್ತಿ ಗುಂಪುಗಳು ರಾಜಕಾರಿಣಿಗಳ ಪಾಲಿಗೆ ಮಿನಿ ಟೆರರಿಸ್ಟ್ ಗ್ರೂಪ್ ಗಳಂತೆ ಕಂಡು ಬಂದಲ್ಲಿ ಅಚ್ಚರಿಯಿಲ್ಲ. ಹಾದಿ ತಪ್ಪಿದ ಗಂಡಸನ್ನು, ಸಮಾಜವನ್ನು ಸರಿ ಹಾದಿಗೆ ತರುವ ಶಕ್ತಿ ಸ್ತ್ರೀಯರಿಗೆ ಇದೆ. ಆದರೆ ಅವರೇ ಹಾದಿ ತಪ್ಪಿದರೆ? ಒಂದು ಒಂದು ರೀತಿ ಧರೆ ಹತ್ತಿ ಉರಿದೊಡೆ ಎಂಬ ಮಾತನ್ನು ನೆನಪಿಸುತ್ತದೆ.
ಹಾಗಂತ ಸ್ತ್ರೀ ಸಬಲಿಕರಣ ಸಲ್ಲದು, ಆಗಬಾರದು ಅಂತಲ್ಲ. ಆದರೆ ಅದಕ್ಕೆ ಬೇರೆಯದೇ ಆದ ರೀತಿಗಳಿವೆ. ಮಾಗಱಗಳಿವೆ. ಸಕಾರಾತ್ಮಕವಾಗಿ ಸ್ತ್ರೀ ಶಕ್ತಿ ಸಂಘಗಳನ್ನು ಬೆಳೆಸುವ ಸಾಧ್ಯತೆಗಳಿದ್ದವು. ಆದರೆ ಆಗಿದ್ದು ಮಾತ್ರ ಬೇರೆಯದೇ!
ಆದರೆ ಒಂದಂತೂ ನಿಜ ಶಶಿ, ಹಳ್ಳಿಗಳ ಜನರು, ರೈತರು, ಈ ರಾಜಕೀಯ, ಗ್ರಾಮ ಪಂಚಾಯಿತಿಯ ವಿಷ ವತುಱಲದಿಂದ ಹೊರ ಬಂದು, ಹಿಂದಿನಂತೆ ಒಂದಾಗುವವರೆಗೆ ಈ ಸಮಸ್ಯೆ ತಪ್ಪಿದ್ದಲ್ಲ. ರೈತರು ತಮ್ಮ ಹಾದಿ ತಪ್ಪಿಸುತ್ತಿರುವ ಜಿಲ್ಲಾ ಮಟ್ಟದ ರೈತ ನಾಯಕರಿಂದ ಹಿಡಿದು, ರಾಜ್ಯ ಮಟ್ಟದ ನಾಯಕರ ವರೆಗೆ, ಅವರ ಹಿಂದಿರುವ ಸತ್ಯಗಳನ್ನು ಅರಿಯಬೇಕು. ಕೃಷಿ ಕುರಿತು ರೈತರು ಈಗ ಕೇಳಬೇಕಾದ್ದು ಯಶಸ್ವೀ ಸಾವಯವ ಕೃಷಿಕರ ಕಥೆಗಳನ್ನೇ ಹೊರತು, ರಸ ಗೊಬ್ಬರ ಇಲ್ಲ ಎಂದು ಕಲ್ಲು ಹೊಡೆಯಲು ಪ್ರೇರೇಪಿಸುವ ರೈತ ನಾಯಕರ ಮಾತುಗಳನ್ನಲ್ಲ!
ಇಲ್ಲದಿದ್ದರೆ ನೀನು ಬರೆದಿರುವುದು ಏನೂ ಅಲ್ಲ. ಮುಂದಿನ ಚುನಾವಣೆ ಹೊತ್ತಿಗೆ ಒಂದು ಭಗವದ್ಗೀತೆಯನ್ನೇ ನೀನು ಬರೆಯಬೇಕಾದಿತು.
ಹುಷಾರ್ !!!

Published in: on ಆಗಷ್ಟ್ 3, 2008 at 2:11 ಅಪರಾಹ್ನ  ನಿಮ್ಮ ಟಿಪ್ಪಣಿ ಬರೆಯಿರಿ