ಕಲಾಂ ಮೇಷ್ಟ್ರಮುಂದೆ ಪಾಠ ಓದಿ ಒಪ್ಪಿಸಿದ್ದು!

ಕಲಾಂ ಮೇಷ್ಟ್ರ ಮುಂದೆ

ಕಲಾಂ ಮೇಷ್ಟ್ರ ಮುಂದೆ

ಕಲಾಂಜಿ ಒಳಗೆ ಕರೆದಾಗ ಎಲ್ಲರಿಗಿಂತ ನಾನೇ ಕೊನೆಗೆ ಒಳಗೆ ಹೋದೆ. ಅಷ್ಟರಲ್ಲೇ ಸಚ್ಚಿದಾನಂದ್ ಸರ್ ಎಲ್ಲರನ್ನೂ ಪರಿಚಯಿಸುತ್ತಿದ್ದರು. ನಾನು ಒಳಗೆ ಹೋಗುತ್ತಲೇ ಕಲಾಂಜಿಯವರ ಕೈ ಕುಲುಕಿದೆ. ‘ಓ ಯೂ ಹ್ಯಾವ್ ರಿಟನ್ ದ ಬುಕ್’ ಎನ್ನುತ್ತಾ ಕಲಾಂಜಿ ಕೈ ಕುಲುಕಿದರು. ಮಾತನಾಡುತ್ತಲೇ ತಮ್ಮ ಕುರ್ಚಿಯಿಂದ ಮೇಲೆದ್ದು ಬಂದ ಕಲಾಂಜಿ ಎದುರಿಗೇ ಇದ್ದ ಚೇರ್ ಗಳತ್ತ ನಮ್ಮನ್ನು ಕರೆದುಕೊಂಡು ಹೋದರು. ಕಲಾಂಜಿಯವರು ಕುಳಿತ ಕುರ್ಚಿಯ ಪಕ್ಕ ಒಂದು ಸೋಫಾ ಇತ್ತು. ಅದರತ್ತ ಹೋಗಲು ಪುಟ್ಟ ಟೇಬಲ್ ಅಡ್ಡ ಇತ್ತು. ನಾವು ಅದನ್ನು ಸರಿಸುವ ಮುನ್ನವೇ ಕಲಾಂಜಿ ತಾವೇ ಆ ಪುಟ್ಟ ಟೇಬಲ್ ಸರಿಸಲು ಮುಂದಾಗಿಬಿಟ್ಟಿದ್ದರು.
ಮಾಜಿ ರಾಷ್ಟ್ರಪತಿಯಾಗಿದ್ದರೂ, ಯಾವುದೇ ಹಮ್ಮು ಬಿಮ್ಮುಗಳಿಲ್ಲದೆ ಆ ಪುಟ್ಟ ಟೇಬಲ್ ಸರಿಸಲು ಮುಂದಾಗಿದ್ದು, ಅವರು ಯಾಕೆ ಮಹಾನ್ ವ್ಯಕ್ತಿಯಾಗಿದ್ದಾರೆ ಎಂಬುದನ್ನು ಸಾರಿ ಸಾರಿ ಹೇಳುತ್ತಿತ್ತು. ಎರಡು-ಮೂರು ಸೆಕೆಂಡ್ನಲ್ಲಿ ನಡೆದ ಈ ಘಟನೆ ಅಲ್ಲಿದ್ದ ಹೆಚ್ಚಿನವರ ಗಮನಕ್ಕೆ ಬರುವ ಮುನ್ನವೇ ಮುಗಿದು ಹೋಗಿತ್ತು.
ಕಲಾಂಜಿಯವರಿಗೆ ಹೂಗುಚ್ಚ ನೀಡಿದೆವು. ಅಷ್ಟರಲ್ಲೇ ನಾವು ಭರ್ಜರಿಯಾಗಿ ಬಣ್ಣದ ಕಾಗದ, ರಿಬ್ಬನ್ನು ಕಟ್ಟಿಕೊಂಡು ಹೋಗಿದ್ದ ಪುಸ್ತಕದ ಬಂಡಲನ್ನು ಕಲಾಂಜಿ ಕೈಗೆ ನೀಡಿದೆವು. ಆದರೆ ಕಲಾಂಜಿ ಬಹು ಸೂಕ್ಷ್ಮ! ಅಲ್ಲೇ ನಮಗೊಂದು ಪುಟ್ಟ ಪಾಠ ಕಲಿಸಿದರು. ಪುಸ್ತಕದ ಬಂಡಲನ್ನು ಈ ರೀತಿ ಪ್ಯಾಕ್ ಮಾಡಬಾರದು. ತೆಗೆಯಲು ತೊಂದರೆಯಾಗುತ್ತದೆ. ತುಂಬಾ ಕಡೆ ಅಂಟಿಸಿ ಬಿಟ್ಟಿರುತ್ತಾರೆ ಎಂದರು. ಅವರ ಮಾತಿನ ಸೂಕ್ಷ್ಮತೆ ಗಮನಿಸಿ, ನಾವೇ ಬಣ್ಣದ ಕಾಗದ ತೆಗೆಯಲು ಮುಂದಾದೆವು. ತಕ್ಷಣ ವೀರಣ್ಣ ಕಮ್ಮಾರ್ ಬಣ್ಣದ ಕಾಗದ ತೆಗೆಯಲು ಹೋದರು.

ವೀರಣ್ಣ ಕಮ್ಮಾರ್

ವೀರಣ್ಣ ಕಮ್ಮಾರ್

ಆದರೆ ಕಲಾಂಜಿ ಹೇಳಿದಂತೆಯೇ ಆಗಿತ್ತು.!! ಪುಸ್ತಕ ಪ್ಯಾಕ್ ಮಾಡಲು ನೀಡಿದ್ದಾಗ ಅದನ್ನು ಪ್ಯಾಕ್ ಮಾಡಿದ್ದವರು 3-4 ಕಡೆ ಬಣ್ಣದ ಕಾಗದಕ್ಕೆ ಟೇಪ್ ಅಂಟಿಸಿಬಿಟ್ಟಿದ್ದರು. ನಮಗೇ ಛೇ! ಹೌದಲ್ಲ ಅನ್ನಿಸಿತ್ತು. ಅದು 3-4 ಕಡೆ ಭರ್ಜರಿಯಾಗಿ ಅಂಟಿಕೊಂಡು ಬಿಟ್ಟಿತ್ತು. ವೀರಣ್ಣ ಅದನ್ನು ಬಿಡಿಸಲು ಒದ್ದಾಡುವಾಗಲೇ ಕಲಾಂಜಿ ‘ಸೀ ವಾಟ್ ಐ ಹ್ಯಾಡ್ ಸೆಡ್ ಈಸ್ ಟ್ರೂ’ ಎಂದು ಮೇಷ್ಟ್ರು ಪಾಠ ಹೇಳಿಕೊಟ್ಟನಂತರ ಹುಡುಗರಿಗೆ ಅರ್ಥವಾದಾಗ ಸಂತೋಷದಿಂದ ಮುಗುಳ್ನಗುತ್ತಾರಲ್ಲ, ಆ ರೀತಿಯ ನಗೆ ಬೀರಿದರು.
ಕಲಾಂಜಿ ಪುಸ್ತಕವನ್ನು ಬಿಡುಗಡೆ ಮಾಡಿದರು. ಪ್ರಥಮ ಪ್ರತಿಯನ್ನು ಸಚ್ಚಿದಾನಂದ ಮೂರ್ತಿ ಅವರಿಗೆ ನೀಡಿದರು. ಪುಸ್ತಕವನ್ನು ಈ ಮೊದಲೇ ನೋಡಿದ್ದ ಕಲಾಂಜಿ, ಅದರಲ್ಲಿ ಏನೋ ಹುಡುಕುವಂತೆ ಅತ್ತಿತ್ತ ಎರಡು ಮೂರು ಬಾರಿ ಪುಟಗಳನ್ನು ತಿರುವಿ ಹಾಕಿದರು. ನಂತರ ‘ಯೂ ಸಿಟ್ ಹಿಯರ್’ ಎಂದು ಪಕ್ಕದ ಸೋಫಾದಲ್ಲಿ ಕೂಡಿಸಿದರು. ನನಗೆ ಸಚ್ಚಿದಾನಂದ ಸರ್ ಹೇಳಿದ್ದು ನನೆಪಿಗೆ ಬಂತು! ಪ್ರಾಯಶ: ಈಗ ಏನಾದರೂ ಬರೆಯಲು ಹೇಳುತ್ತಾರೆ ಎಂದುಕೊಂಡು ನನಗೆ ಅರಿವಿಲ್ಲದಂತೆ ಜೇಬಿನಲ್ಲಿದ್ದ ಪೆನ್ ಕೈಗೆ ತೆಗೆದುಕೊಂಡಿದ್ದೆ. ಕಲಾಂಜಿ ಹೇಳಿದ್ದಂತೆ ಕುಳಿತುಕೊಂಡೆ. ಜೊತೆಯಲ್ಲಿದ್ದ ಪತ್ರಕರ್ತ ಮಿತ್ರರೆಲ್ಲರೂ ಎದುರಿಗೆ ಕುಳಿತರು.

ಕಲಾಂಜಿಯವರಿಂದ ಪ್ರಥಮ ಪ್ರತಿ ಸ್ವೀಕರಿಸಿದ ಶ್ರೀ ಸಚ್ಚಿದಾನಂದ ಮೂರ್ತಿ

ಕಲಾಂಜಿಯವರಿಂದ ಪ್ರಥಮ ಪ್ರತಿ ಸ್ವೀಕರಿಸಿದ ಶ್ರೀ ಸಚ್ಚಿದಾನಂದ ಮೂರ್ತಿ

ಕಲಾಂಜಿ ಒಂದು ಪುಟ ತೆಗೆದರು. ‘ರೀಡ್ ದಿಸ್’ ಎಂದು ತೋರಿಸಿದರು. ಏನೋ ಬರೆಯಲು ಹೇಳುತ್ತಾರೆ ಎಂದುಕೊಂಡಿದ್ದ ನನಗೆ ಯಾವುದೋ ನಿಗದಿತ ಪುಟ ತೆಗೆದು ಓದಲು ಹೇಳುತ್ತಿದ್ದಾರೆ ಎಂದರೆ ಆ ಪುಟದಲ್ಲಿ ಏನೋ ಪ್ರಮಾದವಾಗಿರಬೇಕು! ಅಥವಾ ಏನೋ ಅಲ್ಲಿ ಸಲ್ಲದ್ದನ್ನು ಬರೆದಿರಬೇಕು!! ಅದಕ್ಕೆ ಆ ಪುಟವನ್ನೇ ಹುಡುಕಿ ಓದಲು ಹೇಳುತ್ತಿದ್ದಾರೆ. ಇಲ್ಲದಿದ್ದರೆ ಏಕೆ ಹೇಳುತ್ತಾರೆ? ಎಂಬ ಭಾವನೆ ಮನದಲ್ಲಿ ಮೂಡಿತು. ಅವರು ತೆರೆದು ಕೊಟ್ಟ ಪುಟ ನೋಡಿದೆ. ಅದು ಚಂದ್ರಯಾನ ಪುಸ್ತಕದಲ್ಲಿ 10ನೇ ಅಧ್ಯಾಯ ‘ಭಾರತದೆಡೆಗೆ ಅಮೇರಿಕಾ ಅನುಮಾನ’ ಎಂಬ ಅಧ್ಯಾಯದಲ್ಲಿರುವ 59 ನೇ ಪುಟ. ಆ ಪುಟದಲ್ಲಿದ್ದ ಮಾಹಿತಿ ಓದಿದೆ. ಅದು ಹೀಗಿತ್ತು…
‘ಇಂತಹ ಬೆಳವಣಿಗೆ, ಹೇಳಿಕೆಗಳಿಗೆ ನಯವಾಗಿಯೇ ಪ್ರತಿಕ್ರಿಯೆ ನೀಡಿದ ಇಸ್ರೊ ನಿರ್ದೇಶಕ ಮಾಧವನ್ ನಾಯರ್, ‘ನಾವು ಯಾರ ಜೊತೆಯೂ ಸ್ಪರ್ಧೆಗಿಳಿದಿಲ್ಲ. ನಮಗೆ ಎಲ್ಲರ ಸಹಕಾರವೂ ಬೇಕು’ ಎಂದು ವಿನಯದಿಂದಲೇ ಹೇಳಿ, ಪರಿಸ್ಥಿತಿಯನ್ನು ತಿಳಿಗೊಳಿಸಿದ್ದರು.

ದಿನೇಶ್ ಅಮಿನ್ ಮಟ್ಟು

ದಿನೇಶ್ ಅಮಿನ್ ಮಟ್ಟು

ಯೋಜನೆ ಯಶಸ್ಸಿನ ಬಗ್ಗೆ ಅಮೆರಿಕಾದಲ್ಲಿ ಯುನೈಟೆಡ್ ಸ್ಟೇಟ್ಸ್ ಇಂಡಿಯಾ ಬ್ಯುಸಿನೆಸ್ ಕೌನ್ಸಿಲ್ (ಯುಎಸ್ಐಬಿಸಿ) ಎಂಬ ಸಂಘಟನೆಯೂ ಅಭಿನಂದನೆ ತಿಳಿಸಿದೆ. ಈ ಸಂಘಟನೆಯಲ್ಲಿ ಅಮೆರಿಕಾದ 280 ಬೃಹತ್ ಕಂಪೆನಿಗಳಿವೆ. ಮುಂದೆ ಅಮೆರಿಕಾ ಮತ್ತು ಭಾರತ ದೀರ್ಘ ಕಾಲದವರೆಗೆ ಬಾಹ್ಯಾಕಾಶದಲ್ಲಿ ಜಂಟಿಯಾಗಿ ಕಾರ್ಯ ನಿರ್ವಹಿಸಬಹುದು ಎಂದು ಈ ಸಂಸ್ಥೆ ಹೇಳಿದೆ.
ಹೀಗೆ ಭಾರತದ ಸಾಧನೆ ಅಮೆರಿಕಾ ಪಾಲಿಗೆ ನುಂಗಲಾರದ ತುತ್ತಿನಂತಾಗಿದೆ. ಅದಕ್ಕೆ ಇಂಬು ನೀಡುವಂತೆ ವಿಶ್ವದ ಮಾಧ್ಯಮಗಳೆಲ್ಲಾ ಇಸ್ರೊ ಸಾಧನೆ ಕೊಂಡಾಡುತ್ತಿದ್ದರೆ, ಬಿಬಿಸಿ ಮಾತ್ರ, ಇನ್ನೂ ಸಾಕಷ್ಟು ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕಿರುವ ಭಾರತಕ್ಕೆ ಇಂತಹ ಯೋಜನೆ ಬೇಕಿತ್ತಾ? ಎಂದು ಕೊಂಕು ಸುದ್ದಿ ಪ್ರಸಾರ ಮಾಡಿತ್ತು.
ಇದೆಲ್ಲದರ ನಡುವೆ ಚಂದ್ರಯಾನದ ಮೂಲಕ ಭಾರತ ಈಗ ಬಾಹ್ಯಾಕಾಶದ ಹೊಸ ಭರವಸೆಯಾಗಿ ಎದ್ದು ನಿಂತಿದೆ. ಆದರೆ ಇದು ಬಾಹ್ಯಾಕಾಶದಲ್ಲಿ ಭಾರತ ಮೊದಲ ಹೆಜ್ಜೆ ಮಾತ್ರ!’.

ಇದಿಷ್ಟನ್ನೂ ಓದಿ ಕಲಾಂಜಿಯವರ ಮುಖ ನೋಡಿದೆ. ಅವರು ‘ಟೆಲ್ ಮಿ ವಾಟ್ ಯೂ ಹ್ಯಾವ್ ರಿಟನ್’ ಎಂದರು. ನಾನು ಛೇ! ಏನು ತಪ್ಪಾಗಿದೆ?? ಎಂದು ಮತ್ತೊಮ್ಮೆ ಆ ಸಾಲುಗಳತ್ತ ಕಣ್ಣಾಡಿಸಿದೆ. ನನಗೇನೂ ಆ ರೀತಿ ಪ್ರಮಾದವಾಗಿದೆ ಎಂದು ಅನ್ನಿಸಲಿಲ್ಲ. ಅಷ್ಟರಲ್ಲೇ ಕಲಾಂಜಿ ಮತ್ತೆ ‘ಟೆಲ್ ಮಿ’ ಎಂದರು. ನಾನು ಪೆದ್ದು ಪೆದ್ದಾಗಿ ‘ಇನ್ ಇಂಗ್ಲೀಷ್ ಆರ್ ಇನ್ ಕನ್ನಡ ಸರ್’ ಎಂದೆ, ಕಲಾಂಜಿ ‘ನೌ ಟೆಲ್ ಮಿ ಇನ್ ಇಂಗ್ಲೀಷ್ ವಾಟ್ ಯೂ ಹ್ಯಾವ್ ರಿಟನ್’ ಎಂದರು.

ಬಿ.ಎಸ್.ಅರುಣ್

ಬಿ.ಎಸ್.ಅರುಣ್

ಸರಿ ಎಂದು ಅದುವರೆಗೆ ಕನ್ನಡದಲ್ಲಿ ಓದಿದ್ದನ್ನೂ ನನ್ನೆಲ್ಲಾ ಇಂಗ್ಲಿಷ್ ಶಬ್ಧಭಂಡಾರ ಬಳಸಿ, ಕಲಾಂಜಿಯವರಿಗೆ ಹೇಳುವಷ್ಟರಲ್ಲಿ ದೆಹಲಿಯ ಚಳಿಯಲ್ಲೂ ಸಣ್ಣಗೆ ಬೆವರು ಮೂಡಿತ್ತು. ಇಂಗ್ಲೀಷ್ನಲ್ಲಿ ಕಷ್ಟಪಟ್ಟು ಎಕ್ಸ್ ಪ್ಲೇನ್ ಮಾಡಿದ ನಂತರ ಕಲಾಂಜಿ ಅಲ್ಲಿಗೇ ಬಿಡದೆ ‘ವಾಟ್ ಡಸ್ ದಟ್ ಮೀನ್’ ಎಂದರು. ನಾನು ಮತ್ತೆ ಹೇಳಿದೆ.
‘ವೈ ಯೂ ಹ್ಯಾವ್ ಮೆನ್ಷನ್ಡ್ ಅಬೌಟ್ ಬಿ.ಬಿ.ಸಿ. ಎಂದರು. ಚಂದ್ರಯಾನ ಉಡಾವಣೆಯಾದಾಗ ಬಿ.ಬಿ.ಸಿ. ‘ಭಾರತದಂತಹ ಬಡ ದೇಶಕ್ಕೆ ಇಂತಹ ಯೋಜನೆ ಬೇಕಾ’ ಎಂಬ ಸುದ್ದಿ ಪ್ರಸಾರ ಮಾಡಿತ್ತು. ಆದ್ದರಿಂದ ಆ ಬಗ್ಗೆ ಪ್ರಸ್ತಾಪಿಸಿದ್ದೇನೆ ಎಂದೆ. ಕಲಾಂಜಿ ‘ಗುಡ್ ಗುಡ್’ ಎನ್ನುತ್ತಾ ಮತ್ತೆ ಪುಸ್ತಕವನ್ನು ನನ್ನ ಕೈಯಿಂದ ತೆಗೆದುಕೊಂಡರು.
ಪುಸ್ತಕದ 146 ನೇ ಪುಟ ತೆರೆದು ಒಂದು ಫೋಟೋ ತೋರಿಸಿ, ಅದೇನು ಎಂದರು. ಅದು ವಿನಾಯಕ್ ಭಟ್ ಬರೆದಿದ್ದ ದಿ ಗ್ರೇಟ್ ಮೂನ್ ಹೋಕ್ಸ್-1835 ಘಟನೆಗೆ ಸಂಬಂಧಿಸಿದ ಲೇಖನ. ನಾನು ಅಲ್ಲಿಯೇ ಇದ್ದ ವಿನಾಯಕ್ ಕಡೆ ಬೆಟ್ಟು ಮಾಡಿ, ‘ಸಾರ್, ಇದನ್ನು ವಿಜಯ ಕರ್ನಾಟಕದ ವಿನಾಯಕ್ ಭಟ್ ಬರೆದಿದ್ದಾರೆ’ ಎಂದು ವಿನಾಯಕ್ ಕಡೆ ಬೆಟ್ಟು ಮಾಡಿ ತೋರಿಸಿ, ನಾನು ತಪ್ಪಿಸಿಕೊಂಡೆ!! ಕಲಾಂಜಿ ವಿನಾಯಕ್ ಕಡೆ ತಿರುಗಿ, ‘ಟೆಲ್ ಮಿ’ ಎಂದರು.

ವಿನಾಯಕ ಠ??್

ವಿನಾಯಕ ಭಟ್

ವಿನಾಯಕ್, ಯಾವ ರೀತಿ 1835ರಲ್ಲೇ ನ್ಯೂಯಾಕ್ಸ್ ಸನ್ ಪತ್ರಿಕೆ ತನ್ನ ಪ್ರಸಾರ ಸಂಖ್ಯೆ ಹೆಚ್ಚಿಸಿಕೊಳ್ಳಲು ಚಂದ್ರನ ಮೇಲೆ ಮಾನವರಿದ್ದಾರೆ ಎಂಬ ಸುಳ್ಳು ಸುದ್ದಿ ಪ್ರಸಾರ ಮಾಡಿತ್ತು ಎಂದು ವಿವರಿಸಿ, ಅದನ್ನು ಕುರಿತೇ ಲೇಖನ ಬರೆಯಲಾಗಿದೆ ಎಂದ. ಕಲಾಂಜಿ ‘ಓ.. ಇಟ್ ಇಸ್ ಇಂಟರೆಸ್ಟಿಂಗ್’ ಎನ್ನುತ್ತಾ, ಬೇರೆ ಬೇರೆ ವಿಷಯಗಳನ್ನು ಪ್ರಸ್ತಾಪಿಸಿದರು. ಚಂದ್ರನ ಮೇಲೆ ಮನುಷ್ಯ ಹೋಗಬಹುದು ಎಂದು 1860 ರಷ್ಟು ಹಿಂದೆಯೇ ಕಾನ್ಸ್ಟಾಂಟಿನ್ ಟಿಶೆಲ್ಸ್ ಎಂಬ ವ್ಯಕ್ತಿ ನಿಖರವಾಗಿ ಊಹಿಸಿ ಹೇಳಿದ್ದ. ಕಾನ್ಸ್ಟಾಂಟಿನ್ ಕಿವುಡನಾಗಿದ್ದ. ಆದರೆ ಅಧ್ಯಯನದಲ್ಲಿ ಅತೀವ ಆಸಕ್ತಿ ಹೊಂದಿದ್ದ. ತನ್ನ ಅಧ್ಯಯನದಿಂದ ವಿವಿಧ ಸಮೀಕರಣಗಳನ್ನು ರಚಿಸಿದ್ದ. ಆ ಮೂಲಕ ಚಂದ್ರನ ಮೇಲೆ ಮನುಷ್ಯ ಹೋಗಬಹುದು ಎಂದು ತಿಳಿಸಿದ್ದ. ಇಂದು ಆತನ ಊಹೆ ನಿಜವಾಗಿದೆ. ನಾವು ಚಂದ್ರನ ಮೇಲೆ ಹೊಗಿ ಬಂದಿದ್ದೇವೆ. ಹೀಗಾಗಿ ಚಂದ್ರಯಾನದ ಕಲ್ಪನೆಯ ಜನಕ ಕನ್ಸ್ಟಾಂಟಿನ್ ಎಂದರು.
ನಂತರ ‘ಹೌ ಮೆನಿ ಡೇಸ್ ಯು ಟುಕ್ ಟು ರೈಟ್ ದಿ ಬುಕ್’ ಎಂದರು.
ಪ್ರಶಾಂತ್ ನಾತೂ

ಪ್ರಶಾಂತ್ ನಾತೂ

‘ಒನ್ ಇಯರ್ ಸರ್’ ಎಂದೆ.
ಓ ಒನ್ ಇಯರ್. ಇಟ್ಸ್ ಎ ಗುಡ್ ಎಫರ್ಟ್. ಗುಡ್ ಬುಕ್. ಯೂ ಶುಡ್ ಕಾಂಟ್ಯಾಕ್ಟ್ ಮಿಸ್ಟರ್ ಮಾಧವನ್ ನಾಯರ್ ಆಲ್ಸೋ’ ಎಂದು ಬೆನ್ನು ತಟ್ಟಿದರು.
ನಂತರ ನಮ್ಮೆಲ್ಲರ ಜೊತೆ ನಿಂತು ಸುಮಾರು 5 ನಿಮಿಷಗಳ ಕಾಲ ಫೋಟೋ ತೆಗೆಸಿಕೊಂಡರು. ಪುಸ್ತಕದ ಮೇಲೆ ತಮ್ಮ ಹಸ್ತಾಕ್ಷರ ಹಾಕಿ ಎಲ್ಲರಿಗೂ ಚಂದ್ರಯಾನ ನೀಡಿದರು. ಸಹಿ ಹಾಕುತ್ತಲೇ ನೀವು ಯಾವ ಪತ್ರಿಕೆ, ಹೆಸರೇನು ಎಂದು ಕೇಳುತ್ತಿದ್ದರು.
ಮತ್ತೊಮ್ಮೆ ಕಲಾಂಜಿಯವರಿಗೆ ಧನ್ಯವಾದಗಳನ್ನು ಹೇಳಿ, ಕೈ ಕುಲುಕಿ ಹೊರಬರುವಷ್ಟರಲ್ಲಿ ಮನಸ್ಸಿನ ಭಾರ ಇಳಿದು ಏನೋ ಸಂತೋಷ ಮೂಡಿತ್ತು. ಅಂತಹ ಮಹಾನ್ ವ್ಯಕ್ತಿಯ ಕೈಯಿಂದ ಚಂದ್ರಯಾನ ಪುಸ್ತಕ ಬಿಡುಗಡೆ ಮಾಡಿಸಿದ್ದಕ್ಕೆ ಸಾರ್ಥಕತೆಯ ಭಾವದಲೆಯಲ್ಲಿ ತೇಲಾಡುತ್ತಿದ್ದೆ.

ಕಲಾಂ ಮೇಷ್ಟ್ರ ಜೊತೆಗೊಂದು ಗ್ರೂಪ್ ಫೊಟೋ

ಕಲಾಂ ಮೇಷ್ಟ್ರ ಜೊತೆಗೊಂದು ಗ್ರೂಪ್ ಫೊಟೋ

Advertisements
Published in: on ಫೆಬ್ರವರಿ 5, 2009 at 10:10 ಅಪರಾಹ್ನ  Comments (3)  

The URI to TrackBack this entry is: https://shivaprasadtr.wordpress.com/2009/02/05/%e0%b2%95%e0%b2%b2%e0%b2%be%e0%b2%82-%e0%b2%ae%e0%b3%87%e0%b2%b7%e0%b3%8d%e0%b2%9f%e0%b3%8d%e0%b2%b0%e0%b2%ae%e0%b3%81%e0%b2%82%e0%b2%a6%e0%b3%86-%e0%b2%aa%e0%b2%be%e0%b2%a0-%e0%b2%93%e0%b2%a6/trackback/

RSS feed for comments on this post.

3 ಟಿಪ್ಪಣಿಗಳುನಿಮ್ಮ ಟಿಪ್ಪಣಿ ಬರೆಯಿರಿ

 1. ನಮಗೂ ಟೆನ್ಷನ್ ಕ್ರಿಯೇಟ್ ಮಾಡಿದ್ರಿ,ಸಧ್ಯ ಬಚಾವ್ ಆದ್ರಲ್ಲ ಎಂದು ಮನಸ್ಸು ನಿರಾಳವಾಯ್ತು.ಸರಳ ಸಜ್ಜನಿಕೆಯ ಕಲಾಂಜಿಯವರೊಡನೆ ನೀವು ಕಳೆದ ಆ ಕ್ಷಣಗಳು ಅತ್ಯಮೂಲ್ಯವಾದದ್ದು.ದೆಹಲಿಯಲ್ಲಿನ ಕನ್ನಡ ಪತ್ರಕರ್ತರ ಪರಿಚಯವೂ ಆಯ್ತು.
  ಒಳ್ಳೆಯ ಬರಹಕ್ಕೆ ಧನ್ಯವಾದಗಳು
  ಅಶೋಕ ಉಚ್ಚಂಗಿ

 2. ತುಂಬಾ ಚೆನ್ನಾಗಿವೆ, ಫೋಟೋಗಳು!
  ಬರಹವೂ ಅಷ್ಟೇ ಇಂಟೆರೆಸ್ಟಿಂಗ್ ಆಗಿದೆ.

 3. ಅಂತಹ ವ್ಯಕ್ತಿಯನ್ನು ರಾಷ್ಟ್ರಪತಿಯಾಗಿ ಪಡೆದ ಭಾರತವೇ ಧನ್ಯ!

  ಅವರಿಂದ ನಿಮ್ಮ ಪುಸ್ತಕ ಬಿಡುಗಡೆಯಾಗಿದ್ದು ಸಂತಸದ ವಿಷಯ.. ಅಭಿನಂದನೆಗಳು.


ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: