ಫೇಸ್ ಲೆಸ್ ಜರ್ನಲಿಸ್ಟ್ ಮತ್ತು ಬ್ಲಾಗ್ ಗಳು ಬೇಕೇ?

mask%20cotton%20full%20skullಕನ್ನಡದಲ್ಲಿ ಯಾಕೋ ಫೇಸ್ ಲೆಸ್ ಜರ್ನಲಿಸ್ಟ್ ಗಳು, ಬ್ಲಾಗುಗಳ ಸಂಖ್ಯೆ, ಹೊಟ್ಟೆಕಿಚ್ಚು, ತಮ್ಮ ಮೂಗಿನ ನೇರಕ್ಕೆ ತಮಗೆ ತೋಚಿದಂತೆ ಬರೆದುಕೊಳ್ಳುವುದು, ತಮಗೆ ಬೇಕಾದವರು, ಪರಿಚಯ ಇರುವವರ ಬಗ್ಗೆ ಹೊಗಳುವುದು, ಬೇಡವಾದವರ ಬಗ್ಗೆ ತೆಗಳುವುದು, ಇತ್ಯಾದಿ ಹೆಚ್ತಿದೆ.
ಮೊದಲು ಈ ಚಾಳಿ ಆರಂಭವಾದ್ದು ಸುದ್ದಿ ಮಾತು ಎಂಬ ಬ್ಲಾಗಿನಿಂದ. ಅದನ್ನು ನಡೆಸುವವರು ಯಾರು ಎಂದು ಈಗಾಗಲೇ ಎಲ್ಲರಿಗೂ ಅರ್ಥವಾಗ್ತಿದೆ. ಇದರಲ್ಲಿ ಎಲ್ಲಾ ಲೇಖನಗಳನ್ನು ಒನ್ ಸೈಡೆಡ್ ಹಾಗೂ ತಮಗೆ ಬೇಕಾದವರನ್ನು ಹೊಗಳೋಕೆ, ಬೇಡವಾದವರನ್ನು ತೆಗಳೋಕೆ, ಬಳಸಿದ್ದರು. ಅದರಲ್ಲಿ ಬಂದ ಲೇಖನಗಳೆಲ್ಲ ಒನ್ ಸೈಡೆಡ್ ಆಗಿದ್ದವು. ಸುದ್ದಿ ಮಾತು ನಿಸ್ಪಕ್ಷಪಾತವಾಗಿ ಕೆಲಸ ಮಾಡಬಹುದು ಎಂದು ನಿರೀಕ್ಷಿಸಿದ್ದವರಿಗೆಲ್ಲ ನಿರಾಶೆಯಾಗಿತ್ತು. ಬ್ಲಾಗ್ ಜನಪ್ರಿಯತೆಯನ್ನು ತಮಗೆ ಬೇಕಾದಂತೆ ಬಳಸಲು ಆರಂಭಿಸಿದ್ದು ಎದ್ದು ಕಾಣುತ್ತಿದೆ. ನಮ್ಮ ಪಾಡಿಗೆ ನಾವು ಕೆಲಸ ಮಾಡಿಕೊಂಡಿದ್ದರೂ, ಇನ್ಯಾರೋ ಫೇಸ್ ಲೆಸ್ ಜರ್ನಲಿಸ್ಟ್ ಗಳು ಅನಾನಿಮಸ್ ಹೆಸರಿನಲ್ಲಿ ತಮಗೆ ಬೇಕಾದವರು, ಬೇಡವಾದವರು ಎಲ್ಲರ ವಿರುದ್ದ ಬೇಕಾಬಿಟ್ಟಿ ಕಾಮೆಂಟ್ ಮಾಡಿದ್ದರು. ಹೇಗೂ ತಾವು ಯಾರು ಎಂದು ತಿಳಿಯುವುದಿಲ್ಲ. ಹೀಗಾಗಿ ತನ್ನ ಪಾಡಿಗೆ ತಾನು ಕೆಲಸ ಮಾಡಿಕೊಂಡಿರುವ ಮತ್ತಾವುದೋ ಪತ್ರಕರ್ತನ ಚಾರಿತ್ರ್ಯವಧೆ ಮಾಡುವುದು ಸುಲಭ! ಉಗ್ರರು ಬಾಂಬ್ ಇಟ್ಟ ಸಂದರ್ಭದಲ್ಲಿ ನಾವು ಕೊಟ್ಟ ಫೋನೋ, ಮುಂಬೈ ಟೆರರ್ ಕವರೇಜ್ ಮುಂದಿಟ್ಟುಕೊಂಡು, ನಾನು ಟಿವಿ9 ನಲ್ಲಿ ಆ ಕವರೇಜನ್ನು ಪ್ರಚಾರಕ್ಕೆ ಮಾಡಿದ್ದು, ಚಡ್ಡಿ ಪತ್ರಕರ್ತ, ಪ್ರಚಾರ ಪ್ರಿಯ ಎಂದೆಲ್ಲ ಕೆಲವರು ಕಾಮೆಂಟ್ ಮಾಡಿದ್ದರು. ಹೇಗೂ ಫೇಸ್ ಲೆಸ್ ಅಲ್ವಾ? ಏನು ಬರೆದರೂ ನಡೆಯುತ್ತದೆ ಎಂಬ ಧೋರಣೆ. ಇದೇ ರೀತಿಯ ಸಮಸ್ಯೆಯನ್ನು ಅನೇಕರು ಎದುರಿಸಿದ್ದರು. ನಮ್ಮ ಪಾಡಿಗೆ ನಾವು ಇದ್ದರೂ, ಮತ್ತ್ಯಾರೋ ಮಾಡಲು ಕೆಲಸವಿಲ್ಲದವರು ನಮ್ಮ ಹೆಸರು ಹೇಳಿಕೊಂಡು ಕಚ್ಚಾಡುವುದು ನೋಡಿ ನಗಬೇಕೋ? ಅಳಬೇಕೋ ತಿಳಿಯುತ್ತಿಲ್ಲ.
ನಂತರ ಮತ್ತೊಂದು ಬ್ಲಾಗ್ ಶುರುವಾದದ್ದು ಸುದ್ದಿ ಮನೆ ಕಥೆ! ಅದು ಹುಟ್ಟಿದ ಒಂದೇ ವಾರಕ್ಕೆ ಕೊನೆಯುಸಿರು ಎಳೆಯಿತು. ಅದರಲ್ಲೂ ಹೀಗೇ ಬೇಕಾಬಿಟ್ಟಿ ಬರೆದರು. ಟಿವಿ9 ಗಂಪುಗಾರಿಗೆ ಎಂದೆಲ್ಲ ಬರೆದು ತಮಗೆ ಬೇಕಾದವರು, ಬೇಡವಾದವರೆಲ್ಲರ ಹೆಸರು ಹಾಕಿ ತಮಗೆ ತೋಚಿದ ಗುಂಪಿನೊಂದಿಗೆ ಜೋಡಿಸಿದ್ದರು. ಸುವರ್ಣ ಚಾನೆಲ್ ಗೆ ಹೋಗಲು ಅನಂತ್ ಕುಮಾರ್, ರಾಜೀವ್ ಚಂದ್ರಶೇಖರ್, ನನ್ನ ನಡುವೆ ಮಾತುಕತೆ ನಡೆದಿದೆ ಎಂದು ಗೀಚಿದ್ದರು. ಅದರ ಪರಿಣಾಮ ಏನಾಗುತ್ತಿದೆ ಎಂಬ ಅರಿವೂ ಇಲ್ಲದೆ! ಹೇಗೂ ಫೇಸ್ ಲೆಸ್ ಅಲ್ವಾ? ಉಳಿದಂತೆ ಇನ್ನೂ ಅನೇಕರ ಬಗ್ಗೆ ತಮಗೆ ಬೇಕಾದಂತೆ ಬರೆದು ಚಟ ತೀರಿಸಿಕೊಂಡರು. ಆದರೆ ಅದೇನಾಯಿತೋ? ಒಂದೇ ವಾರಕ್ಕೆ ಸುದ್ದಿ ಮನೆ ಕಥೆ ಬ್ಲಾಗ್ ಸ್ಥಗಿತಗೊಂಡಿತ್ತು. ಅಕಾಲಿಕ ಮರಣಕ್ಕೆ ತುತ್ತಾಗಿತ್ತು.
ನಂತರ ಬಂದದದ್ದು ವಿಮರ್ಶಕಿ ಎಂಬ ಮತ್ತೊಂದು ಫೇಸ್ ಲೆಸ್ ಬ್ಲಾಗ್. ಆರಂಭದ ನಿರೀಕ್ಷೆಗಳನ್ನು ಹುಸಿಗೊಳಿಸಿ, ಇದೂ ಸಹ ಅಡ್ಡ ಹಾದಿ ಹಿಡಿದಿರುವುದು ಎದ್ದು ಕಾಣುತ್ತದೆ. ಇತ್ತೀಚೆಗೆ ಕನ್ನಡ ಪ್ರಭದ ರಂಗನಾಥ್, ರವಿ ಹೆಗಡೆ ಕುರಿತು ಬರೆದ ಬರಹವಂತು ಎಷ್ಟು ಕೀಳಾಗಿದೆ ಎಂದರೆ ಬ್ಲಾಗ್ ನಡೆಸುವವರ ಮಾನಸಿಕ ಸ್ಥಿತಿ ಬಗ್ಗೆ ಯೋಚಿಸುವಂತಾಗುತ್ತದೆ. ಇದಕ್ಕೆ ರವಿ ಹೆಗಡೆ ಸ್ಪಷ್ಟೀಕರಣವನ್ನೂ ಸಾಕಷ್ಟು ಸುದೀರ್ಘವಾಗಿ ನೀಡಿದ್ದಾರೆ. ಬರೆಯುವಾಗ ಮಿನಿಮಮ್ ಲೆವೆಲ್ಲಿನ ನಾಗರೀಕತೆ ಅಂತ ಇರುತ್ತೆ. ಅದನ್ನು ಮೀರಿ ಎಲುಬಿಲ್ಲದ ನಾಲಿಗೆಯನ್ನು ಹೇಗೆ ಬೇಕಿದ್ದರೂ ಬಲಸಬಹುದು ಎಂದು ಬ್ಲಾಗ್ ಮಾಡರೇಟರ್ ತಿಳಿದಂತಿದೆ.
ಈಗ ಹೊಸದೊಂದು ಬ್ಲಾಗ್ ಹುಟ್ಟಿಕೊಂಡಿದೆ. ಸ್ಪೋಟಕ ಸುದ್ದಿ. ಈ ಬ್ಲಾಗ್ ನ ಮೊದಲ ಬರಹದಲ್ಲಿ ಟಿವಿ9 ಟಾರ್ಗೆಟ್ ಮಾಡಿದ್ದಾರೆ. ಅದರಲ್ಲಿಯೂ ಸುಖಾ ಸುಮ್ಮನೇ ಕೆಲವರ ಹೆಸರು ಎಳೆ ತಂದು ಸೇರಿಸಿದ್ದಾರೆ. ಈ ಫೇಸ್ ಲೆಸ್ ಬ್ಲಾಗ್ ಇನ್ನೂ ಯಾವ ಅವಾಂತರ ಮಾಡುತ್ತದೋ ಗೊತ್ತಿಲ್ಲ.
ನಾವು ಪತ್ರಕರ್ತರು ಟೀಕೆಯಿಂದ ಹೊರತು ಎಂದು ಯಾವತ್ತೂ ನಾನು ಯೋಚಿಸಿಲ್ಲ. ಆದರೆ ಅದಕ್ಕೊಂದು ಚೌಕಟ್ಟಿರಬೇಕು. ಲಿಮಿಟೇಷನ್ ಇರಬೇಕು. ಈ ರೀತಿ ಫೇಸ್ ಲೆಸ್ ಬ್ಲಾಗ್ ನಡೆಸುವವರು ನೇರವಾಗಿ ಹೊರ ಬಂದು ನಾವು ಇಂತಿಥವರು ಎಂದು ಹೇಳಿಕೊಂಡು ಬ್ಲಾಗ್ ನಡೆಸಲಿ. ಟೀಕೆ ಮಾಡುವುದಿದ್ದರೆ, ಹೊಗಳುವುದಿದ್ದರೆ, ಜಗಳವಾಡುವುದಿದ್ದರೆ ನೇರವಾಗಿಯೇ ಮಾಡಲಿ. ಅದು ನಮ್ಮನ್ನು ನಾವು ತಿದ್ದಿಕೊಳ್ಳಲು, ಇನ್ನು ಉತ್ತಮವಾಗಿ ಕೆಲಸ ಮಾಡಲು, ಬೇರೆಯವರಿಗೂ ಪಾಠವಾಗಲು ಸಾಧ್ಯವಾದರೆ ಆಗಲಿ. ಅಂತಹ ಟೀಕೆಗಳನ್ನು ನಮ್ಮಲ್ಲಿ ಯಾವ ಪತ್ರಕರ್ತರೂ ಬೇಡ ಎನ್ನುವುದಿಲ್ಲ.
ಆದರೆ ಸುಮ್ಮನೇ ಫೇಸ್ ಲೆಸ್ ಆಗಿ ಏಕೆ ಟೀಕೆ ಮಾಡೋದು? ಬ್ಲಾಗ್ ಬರೆಯೋದು?? ಕಂಡ ಕಂಡವರ ಬಗ್ಗೆ ತಮಗೆ ತೋಚಿದಂತೆ ಕಾಮೆಂಟ್ ಮಾಡುವುದು? ಅದರಿಂದ ಯಾವ ವಿಕೃತ ಸಂತೋಷ ಈ ಬ್ಲಾಗ್ ಮಾರೇಟರ್ ಗಳಿಗೆ ಸಿಗುತ್ತದೆ? ಅಲ್ಲಿ ಕಾಮೆಂಟ್ ಮಾಡುವ ವಿಕೃತ ಮನಸ್ಸಿನ ಪತ್ರಕರ್ತರು ನೈತಿಕವಾಗಿ ಎಷ್ಟು ದಿವಾಳಿ ಎದ್ದಿರಬಹುದು? ಇಲ್ಲೆಲ್ಲಾ ಬರೆದಿರುವುದನ್ನು ನೋಡಿ ಮಜಾ ತೆಗೆದುಕೊಳ್ಳುವ ನಾವು, ನಮ್ಮ ಜೊತೆ ಇರುವವರು ನಿಜಕ್ಕೂ ಪತ್ರಕರ್ತರಾ ಎಂದು ಹೇಸಿಗೆ ಹುಟ್ಟುತ್ತದೆ.
ಈ ಎಲ್ಲಾ ಬ್ಲಾಗ್ ಗಳಿಗೆ ಹೋಗಿ ಕೆಟ್ಟ ಕುತೂಹಲದಿಂದ ಇವತ್ತು ಯಾರ ಬಗ್ಗೆ ಬರೆದಿದ್ದಾರೆ? ಯಾರ ವಿರುದ್ಧ ಏನು ಕಾಮೆಂಟು ಮಾಡಿದ್ದಾರೆ ಎಂದು ನೋಡುವುದನ್ನೇ ವಿಕೃತ ಚಟವಾಗಿಸಿಕೊಂಡವರು ಇದ್ದಾರೆ.
ಇಂತಹ ಫೇಸ್ ಲೆಸ್ ಬ್ಲಾಗ್ ಗಳು ನಿಜಕ್ಕೂ ತಾವು ನಿಸ್ಪಕ್ಷಪಾತವಾಗಿದ್ದೇವೆ ಎನ್ನುವುದಿದ್ದರೆ ನೇರವಾಗಿ ಹೊರ ಬಂದು ಬ್ಲಾಗ್ ನಡೆಸಲಿ. ಬೇಡ ಎಂದವರಾರು? ಅಥವಾ ಫೇಸ್ ಲೆಸ್ ಆಗಿದ್ದರೂ ನಮಗೇನೂ ಸಮಸ್ಯೆ ಇಲ್ಲ. ವಾಸ್ತವ ಅರಿತು, ನಿಜ ಏನೆಂದು ತಿಳಿದು ಬರೆಯಲಿ. ಯಾರದ್ದೋ ಚಾರಿತ್ರ್ಯವಧೆ ಮಾಡಲು ಬರೆಯೋದು ಬೇಡ. ಒಂದು ಆರೋಗ್ಯಕರ ಚರ್ಚೆಗೆ ಈ ಎಲ್ಲಾ ಬ್ಲಾಗ್ ಗಳು ದಾರಿ ಮಾಡಿಕೊಡಲಿ. ತಪ್ಪುಗಳನ್ನು ಎತ್ತಿ ತೋರಿಸಲಿ. ಆದರೆ ಅನಗತ್ಯ, ಚಾರಿತ್ರ್ಯ ವಧೆ, ಅನಾನಿಮಸ್ ಕಾಮೆಂಟ್ ಗಳಿಗೆ ಅವಕಾಶ ನೀಡುವುದು, ಒಂದೇ ದೃಷ್ಠಿಕೋನದಲ್ಲಿ ಬರೆಯುವುದು, ಇದೆಲ್ಲ ಬೇಡ. ಅದರಿಂದ ಒಳಿತಂತೂ ಆಗದು.
ಎಲ್ಲರೂ ಒಟ್ಟಾಗಿ ನಾವುರುವ ಚಾನೆಲ್, ಪೇಪರ್ ಗಳು, ಸಂಸ್ಥೆಗಳ ಗೊಡವೆ ಇಲ್ಲದೆ, ಒಂದಾಗಿ ಪತ್ರಿಕೋದ್ಯಮದ ಒಳಿತಿನ ಬಗ್ಗೆ, ನಮ್ಮೆಲ್ಲರ ಮಾನಸಿಕ, ಬೌದ್ಧಿಕ ವಿಕಾಸ, ಬೆಳವಣಿಗೆ ಬಗ್ಗೆ, ಉತ್ತಮ ವಿಚಾರಗಳ ಬಗ್ಗೆ ಚರ್ಚೆ ಮಾಡುವುದು, ಕಲಿಯುವುದು ಎಂದು?
ನಮ್ಮನ್ನು ನೋಡಿ, ಇದೀಗ ತಾನೆ ಪತ್ರಿಕೋದ್ಯಮಕ್ಕೆ ಕಾಲಿಡುತ್ತಿರುವ ವಿದ್ಯಾರ್ಥಿಗಳು ಅಸಹ್ಯ ಪಟ್ಟುಕೊಳ್ಳುತ್ತಾರೆ ಎಂಬ ಕನಿಷ್ಠ ಪ್ರಜ್ಞೆ ನಮ್ಮಲ್ಲಿ ಇರಲಿ.

Advertisements
Published in: on ಆಗಷ್ಟ್ 12, 2009 at 4:13 ಅಪರಾಹ್ನ  Comments (7)  
Tags: , , , , , , , , , , , , , , , , , ,