ಮುಂದಿನ ಜನ್ಮದಲ್ಲಿ ನಾನು ಜೀಬ್ರಾ ಆಗ್ತೀನಿ! ನೀವು!!??

ನಾನು ಸಾಯೋದು ಯಾವಾಗ?
ಇದು ಜಗತ್ತಿನ ಬಹುತೇಕ ಮಂದಿ ಪದೇ ಪದೇ ಕೇಳಿಕೊಳ್ಳುವ, ಇನ್ನೂ ಬಹುತೇಕ ಮಂದಿ ಎಂದಿಗೂ ಕೇಳಿಕೊಳ್ಳಲು ಬಯಸದ ಪ್ರಶ್ನೆ.
ಅದಕ್ಕೆ ಕಾರಣವೂ ಇಲ್ಲದಿಲ್ಲ. ಏಕೆಂದರೆ ಮನುಷ್ಯ ಯಾವುದಕ್ಕೆ ಹೆದರದಿದ್ದರೂ, ‘ಸಾವು’ ಎಂಬ ಎರಡಕ್ಷರದ ಪದಕ್ಕೆ ಹೆದರಿ ಸಾಯುವಷ್ಟು ಮತ್ತಾವುದಕ್ಕೂ ಹೆದರುವುದಿಲ್ಲ. ಜೀವನದುದ್ದಕ್ಕೂ ನಾನು, ನನ್ನದು, ಎಂದು ಮಾಡಿಕೊಂಡು ಬಂದದ್ದೆಲ್ಲವನ್ನೂ ಬಿಟ್ಟು ಹೊರಡುವುದು ಅಷ್ಟು ಸುಲಭವೂ ಅಲ್ಲ. ಆದ್ದರಿಂದಲೇ ಸಾವಿರಾರು ವರ್ಷಗಳಿಂದ ಇಂದಿನವರೆಗೆ ಮನುಷ್ಯ ಸಾವನ್ನು ಗೆಲ್ಲಲು ಪ್ರಯತ್ನಿಸುತ್ತಲೇ ಇದ್ದಾನೆ. ಆದರೆ ಆಗಿಲ್ಲ.
ಹಾಗೊಮ್ಮೆ ಮನುಷ್ಯ ಶಾಶ್ವತವಾಗಿ ಸಾವನ್ನು ಗೆದ್ದು ಬಿಟ್ಟರೆ? ಅದರಿಂದಾಗುವ ಅನಾಹುತವನ್ನು ಊಹಿಸಲೂ ಸಾಧ್ಯವಿಲ್ಲ. ಹಾಗೆಯೇ ಸಾವನ್ನು ಗೆಲ್ಲಲಾಗದೆ, ನಾವು ಇಂತದ್ದೇ ದಿನ ಸಾಯ್ತೀವಿ ಅಂತ ತಿಳಿದು ಬಿಟ್ಟರೆ? ಆಗಲೂ ಅದರಿಂದಾಗುವ ಅನಾಹುತವನ್ನು ಊಹಿಸಲು ಸಾಧ್ಯವಿಲ್ಲ. ಸಾಯುವುದರೊಳಗೆ ನಮ್ಮ ಆಸೆಗಳನ್ನೆಲ್ಲಾ ಈಡೇರಿಸಿಕೊಳ್ಳಲು ಹೊರಟು ಬಿಡುತ್ತೇವೆ. ಅದಕ್ಕೆ ಎಂತದ್ದೇ ದಾರಿ ತುಳಿದರೂ ಅಚ್ಚರಿಯಿಲ್ಲ!
ಮಗು ಹುಟ್ಟಿದ ತಕ್ಷಣ ಜಾತಕ ಕೇಳಿಸುತ್ತಾರೆ. ಆಗ ಈ ಮಗು ಹಾಗೆ ಆಗುತ್ತೆ, ಹೀಗೆ ಆಗುತ್ತೆ, ಇಷ್ಟು ವರ್ಷ ಬದುಕುತ್ತೆ, ಇಂತಿಂತಾ ವರ್ಷ ಇಂಥಹ ಕಂಟಕ ಇದೆ. ಅದಕ್ಕೆ ಇಂತದ್ದೇ ಶಾಂತಿ ಮಾಡಿಸಬೇಕು, ಪೂಜೆ ಮಾಡಿಸಬೇಕು ಎಂದು ಬಿಡುತ್ತಾರೆ. ಆದರೆ ನಿಜಕ್ಕೂ ನಾವು ಇಷ್ಟೇ ದಿನ ಬದುಕ್ತಿವಿ, ಇಂಥದ್ದೇ ದಿನ ಸಾಯ್ತೀವಿ ಅಂತ ಖಚಿತವಾಗಿ ಹೇಳೋಕೆ ಸಾಧ್ಯವಾ?
ಗೊತ್ತಿಲ್ಲ.
ಆದರೆ ಸಾಫ್ಟ್ ವೇರ್ ಜಗತ್ತು ಈ ಬಗ್ಗೆ ಕಿಲಾಡಿ ಐಡಿಯಾ ಮಾಡಿದೆ. ಇದಕ್ಕಾಗಿ ಒಂದು ಸಾಫ್ಟ್ವೇರ್ ಇರುವ ವೆಬ್ಸೈಟ್ ಮಾಡಿದೆ. ‘ಡೆತ್ ಡೇಟ್-ವೆನ್ ವಿಲ್ ಯೂ ಡೈ’ ಅಂತ ಅದರ ಹೆಸರು. ಈ ವೆಬ್ ಸೈಟ್ನಲ್ಲಿ ನಿಮ್ಮ ಹೆಸರು, ಹುಟ್ಟಿದ ದಿನಾಂಕ, ಲಿಂಗ, ತೂಕ, ನಿಮ್ಮ ಎತ್ತರವನ್ನು ಭತಿಱ ಮಾಡಿ ಕೆಳಗೆ ಇರುವ ಕ್ಯಾಲ್ಕುಲೇಟ್ ಎಂಬ ಐಕಾನ್ ಒತ್ತಿದರೆ ಸಾಕು! ನಿಮ್ಮ ಸಾವಿನ ದಿನಾಂಕ ಎದುರಿಗೆ ಯಮರಾಜನಂತೆ ಪ್ರತ್ಯಕ್ಷವಾಗಿ ಬಿಡುತ್ತೆ! ಒಂದು ಸಲ ಮೈ ಭಯದಿಂದ ಥರಗುಡುತ್ತದೆ!
ಉಡಾಹರಣೆಗೆ ನನ್ನ ಹೆಸರು ಶಿವಪ್ರಸಾದ್, ತೂಕ: 70, ಎತ್ತರ 164 ಸೆಂ.ಮೀ. ಸಿಗರೇಟು, ಮದ್ಯ, ಡ್ರಗ್ಸ್ ಇಲ್ಲ. ಇದರ ಜೊತೆಗೆ Date of Birth! ಇಷ್ಟು ಟೈಪ್ ಮಾಡಿ, ಕ್ಯಾಲ್ಕುಲೇಟ್ ಬಟನ್ ಒತ್ತಿದೆ.
ಪ್ರತ್ಯಕ್ಷವಾಯ್ತು ನೋಡಿ ನನ್ನ ಡೆತ್ ಡೇಟ್! ಆಗ ಬಂದ ವಿವರ ಇದು.
ಸಾಯುವ ಅಂದಾಜು ದಿನಾಂಕ: 20-10-2039
ಸಾಯಲು ಉಳಿದಿರುವ ಸಮಯ: 31 ವರ್ಷ, 17 ದಿನಗಳು ಮಾತ್ರ!
ಅಷ್ಟೇ ಅಲ್ಲ… ನಮ್ಮನ್ನು ಇನ್ನೂ ಹೆದರಿಸುವಂತೆ ಸೆಕೆಂಡ್ ಲೆಕ್ಕದಲ್ಲೂ ನಾವು ಇನ್ನು ಎಷ್ಟು ಸೆಕೆಂಡ್ ಮಾತ್ರ ಬದುಕುತ್ತೇವೆ ಎಂದೂ ಸಹ ತೋರಿಸುತ್ತದೆ. ಆ ಪ್ರಕಾರ ನಾನಿನ್ನು ಬದುಕುವುದು ಕೇವಲ 979723065 ಸೆಕೆಂಡ್ ಮಾತ್ರ! ನೀವು ಇದನ್ನು ಓದುವ ಹೊತ್ತಿಕ್ಕೆ ನನ್ನ ಆಯಸ್ಸು ಇನ್ನೂ ಕೆಲ ಸೆಕೆಂಡ್ ಕಡಿಮೆಯಾಗಿಬಿಟ್ಟಿರುತ್ತದೆ!.
ಇಷ್ಟಕ್ಕೆ ಇದು ಮುಗಿಯೋಲ್ಲ. ನೀವು ಜೀವನದಲ್ಲಿ ಅಂದುಕೊಂಡದ್ದು ಆಗುತ್ತೋ ಇಲ್ಲವೋ ಎಂಬುದನ್ನೂ ತಿಳಿಸುತ್ತೆ. ಪುನರ್ಜನ್ಮದಲ್ಲಿ ನಿಮಗೆ ನಂಬಿಕೆ ಇದ್ದರೆ ಮುಂದಿನ ಜನ್ಮದಲ್ಲಿ ನೀವು ಏನು ಆಗಿ ಹುಟ್ತೀರಾ ಅಂತಾನೂ ಇದು ತೋರಿಸುತ್ತೆ.
ಕುತೂಹಲ ತಡೆಯಲಾರದೆ ಮತ್ತೆ ನನ್ನ ವಿವರಗಳನ್ನು ಭತಿಱ ಮಾಡಿ, ಮುಂದಿನ ಜನ್ಮದಲ್ಲಿ ನಾನು ಏನಾಗ್ತೀನಿ ತೋರ್ಸು ಎಂದೆ. ಬಂದ ಉತ್ತರ ಜೀಬ್ರಾ! ಹೌದು!! ಮುಂದಿನ ಜನ್ಮದಲ್ಲಿ ನಾನು ಜೀಬ್ರಾ ಆಗ್ತೀನಂತೆ!
ಹೀಗೆ ನಾವು ಯಾವಾಗ ಸಾಯ್ತೀವಿ! ಸತ್ತ ನಂತರ ಏನಾಗ್ತೀವಿ ಎಂದು ನಿಜಕ್ಕೂ… ನಿಜಕ್ಕೂ ತಿಳಿಯಲಾರಂಭಿಸಿದರೆ ಆಗುವ ಅನಾಹುತಕ್ಕೆ ಲೆಕ್ಕವಿಲ್ಲ. ಅದೇನೇ ಇರಲಿ, ನಮ್ಮ ಈ ಕುತೂಹಲವನ್ನು ಈ ಡೆತ್ ವೆಬ್ ಸೈಟ್ ಸರಿಯಾಗೇ ಬಳಸಿಕೊಳ್ತಿದೆ. ಇದಕ್ಕೆ ಭೇಟಿ ನೀಡುವವರ ಸಂಖ್ಯೆ ಸಿಕ್ಕಾಪಟ್ಟೆ ಏರ್ತಿದೆ. ಅದರಿಂದ ಇವರಿಗೆ ಒಳ್ಳೆ ಆದಾಯವೂ ಬರ್ತಿದೆ! ಮನುಷ್ಯನ ಸಾವಿನ ಭಯವನ್ನೂ ಹೇಗೆ ಲಾಭವನ್ನಾಗಿ ಮಾಡಿಕೊಳ್ಳಬಹುದು ಎಂಬುದಕ್ಕೆ ಇದು ಉದಾಹರಣೆ!
ನೀವೂ ಬೇಕಿದ್ರೆ ಇದಕ್ಕೆ ಭೇಟಿ ನೀಡಿ. ಒಮ್ಮೆ ಟ್ರೈ ಮಾಡಿ! ಆದರೆ ಅದರಲ್ಲಿ ಬರೋ ವಿವರಗಳನ್ನು ನಂಬೋದು, ಬಿಡೋದು ನಿಮಗೆ ಬಿಟ್ಟ ವಿಚಾರ. ನಂಬದಿರೋದೆ ವಾಸಿ.
ಕುತೂಹಲಕ್ಕೆ ಬೇಕಿದ್ರೆ http://codes.beboindia.com/deathdate.php ಈ ವೆಬ್ ಸೈಟ್ ಗೆ ಭೇಟಿ ನೀಡಿ ಟ್ರೈ ಮಾಡಿ.
ಭಯ ಆಗುತ್ತೆ ಅಂದ್ರೆ ಬಿಟ್ ಬಿಡಿ!
ಟ್ರೈ ಮಾಡಿದ್ರೆ ಮುಂದಿನ ಜನ್ಮದಲ್ಲಿ ಏನಾಗ್ತೀರಿ ಅಂತ ನನಗೂ ತಿಳಿಸಿ!
ಯಾವುದಕ್ಕೂ ಮುಂದಿನ ಜನ್ಮದಲ್ಲಿ ಸಿಗೋರನ್ನೂ ಈಗ್ಲೇ ಪರಿಚಯ ಮಾಡಿಟ್ಟುಕೊಳ್ಳೋದು ಒಳ್ಳೇದಲ್ವಾ?

Published in: on ಅಕ್ಟೋಬರ್ 3, 2008 at 10:35 ಅಪರಾಹ್ನ  Comments (2)