ಸುದ್ದಿ ಸ್ಪೋಟಕದ ವಿರುದ್ಧ ದೂರು.

28082009006ಸುತ್ತು ಬಳಸದೆ ನೇರವಾಗಿ ವಿಷಯಕ್ಕೆ ಬರುತ್ತೇನೆ. ಸುದ್ದಿ ಸ್ಪೋಟಕ ಬ್ಲಾಗ್ ಮೇಲೆ ದೆಹಲಿಯ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ.

ಕಾರಣವಿಷ್ಟೇ! ಜನರ ವಾಣಿಯಂತಿರುವ ಕನ್ನಡ ದಿನ ಪತ್ರಿಕೆಯೊಂದರಲ್ಲಿ ಉನ್ನತ ಸ್ಥಾನದಲ್ಲಿರುವ, ನಾನು ತುಂಬಾ ಗೌರವಿಸುವ ಹಿರಿಯ ಪತ್ರಕರ್ತರೊಬ್ಬರು, ಹೂವಿನಂತಹ ಮನಸ್ಸಿನ ಮತ್ತೊಬ್ಬ ಪತ್ರಕರ್ತರು ಹಾಗೂ ದೆಹಲಿಯಲ್ಲೇ ಇರುವ ವರದಿಗಾರ ಗೆಳೆಯರೊಬ್ಬರು ನನ್ನ ವಿರುದ್ದ ವಿಸ್ಪರಿಂಗ್ ಕ್ಯಾಂಪೇನ್ ಶುರು ಮಾಡಿ, ಅಪಪ್ರಚಾರಕ್ಕೆ ಮುಂದಾಗಿದ್ದರು. ವಿಸ್ಪರಿಂಗ್ ಕ್ಯಾಂಪೇನ್ ಸಾರಾಂಶ ‘ಸುದ್ದಿ ಸ್ಪೋಟಕ, ವಿಮರ್ಶಕಿ, ಸುದ್ದಿಮಾತು, ಯುಕೆನಿಷದ, ಈ ಎಲ್ಲಾ ಫೇಸ್ಲೆಸ್ ಬ್ಲಾಗ್ ನಡೆಸುತ್ತಿರೋದು ಮತ್ತು ಕೆಲವರ ವಿರುದ್ಧ ಬರೆಯುತ್ತಿರುವುದು, ಹಿಂದೆ ವಿಜಯ ಕರ್ನಾಟಕದಲ್ಲಿದ್ದ ಒಬ್ಬ ಪತ್ರಕರ್ತರು ಹಾಗೂ ಶಿವಪ್ರಸಾದ್’ ಎಂಬುದು.

ಈ ವಿಷಯ ತಿಳಿಸಿದ್ದು ದೆಹಲಿಯಲ್ಲಿರುವ ಇಂಗ್ಲೀಷ್ ಚಾನೆಲ್ ನ ಆಪ್ತಮಿತ್ರ. ಈ ಮಿತ್ರ ಕೆಲ ದಿನಗಳ ಹಿಂದೆ ಫೋನ್ ಮಾಡಿ, ‘ಶಿವಪ್ರಸಾದ್, ಈ ರೀತಿ ಇಂತಹ ಪತ್ರಕರ್ತರೊಬ್ಬರ ಪರವಾಗಿ ಯಾರೋ ಒಬ್ಬರು ಫೋನ್ ಮಾಡಿದ್ದರು. ಅವರಿಗೆ ನೀವೇ ‘ಹಿರಿಯ’ ಪತ್ರಕರ್ತರೊಬ್ಬರ ವಿರುದ್ದ ಬರೆಯುತ್ತಿದ್ದೀರಿ ಎಂಬ ಅನುಮಾನವಿದೆಯಂತೆ. ‘ಸುದ್ದಿ ಸ್ಪೋಟಕ, ವಿಮರ್ಶಕಿ, ಸುದ್ದಿಮಾತು, ಯುಕೆನಿಷದ ಈ ಎಲ್ಲಾ ಬ್ಲಾಗ್ ಗಳನ್ನು ನೀವು ಹಾಗೂ ವಿಜಯ ಕರ್ನಾಟಕದ ಮಾಜಿ ಉದ್ಯೋಗಿಯೊಬ್ಬರು ಸೇರಿ ನಡೆಸುತ್ತಿದ್ದೀರಂತೆ. ನಿಮ್ಮ ವಿರುದ್ಧ ಎಲ್ಲಾ ದಾಖಲೆ ಸಂಗ್ರಹಿಸಿದ್ದಾರಂತೆ. ಶೀಘ್ರದಲ್ಲಿ ನಿಮ್ಮ ವಿರುದ್ಧ ದೂರು ನೀಡುತ್ತಾರಂತೆ. ನೀವು ನಿಮ್ಮ ಪುಸ್ತಕ ಬಿಡುಗಡೆ ಮಾಡಲು ಅವರನ್ನು ಕೇಳಿದ್ದಿರಂತೆ. ಅದಕ್ಕೆ ಅವರು ಒಪ್ಪಲಿಲ್ಲವಂತೆ. ಹೀಗಾಗಿ ನೀವು ಅವರ ವಿರುದ್ಧ ಬರೆಯುತ್ತಿದ್ದೀರಂತೆ’ ಎಂದು ತಿಳಿಸಿದಾಗ ಜೋರಾಗಿ ನಕ್ಕೆ. ಆ ಮಿತ್ರ ‘ನಗಬೇಡಿ. ಇದು ಸೀರಿಯಸ್’ ಎಂದರು. ನನಗಂತೂ ಚಂದಮಾಮ ಕಥೆಗಿಂತ ಇದು ಚನ್ನಾಗಿದೆ ಎನ್ನಿಸತೊಡಗಿತ್ತು. ಸುಮಾರು 45 ನಿಮಿಷ ಫೋನ್ ನಲ್ಲೇ ಆ ಮಿತ್ರನಿಗೆ ಯಾಕೆ ನಾನು ಆ ಬ್ಲಾಗ್ ಬರೆಯಲು ಸಾಧ್ಯವೇ ಇಲ್ಲ ಎಂದು ಎಳೆ ಎಳೆಯಾಗಿ ವಿವರಿಸಿದಾಗ ಅವರಿಗೂ ಮನವರಿಕೆಯಾಗಿತ್ತು.

ಮೊದಲೇ ನನಗೆ ಒಂದು ನಿಮಿಷ ಪುರುಸೊತ್ತಿಲ್ಲದ ಕೆಲಸ. ವಾರಕ್ಕೊಮ್ಮೆ ನನ್ನ ಬ್ಲಾಗ್ ಗೆ ಬರೆಯುವುದೇ ಕಷ್ಟ. ಜೊತೆಗೆ ಈಗ ಮತ್ತೊಂದು ಪುಸ್ತಕ ಬರೆಯಲು ಕುಳಿತಿದ್ದೇನೆ. ಅದಕ್ಕೆ ನನಗೆ ದಿನಕ್ಕೆ 3ರಿಂದ 4ಗಂಟೆ ಸಮಯ ಬೇಕು. ಮೇಲೆ ಕಚೇರಿ ಕೆಲಸ. ಗಂಟೆಗೊಮೆ ಫೋನೋ ಕೊಡಬೇಕು. ನನ್ನ ಏಕೈಕ ಪತ್ನಿ ಅರ್ಪಿತಾ ದೂರದ ಕರ್ನಾಟಕದಲ್ಲಿರುವುದರಿಂದ ಅಡುಗೆ, ಪಾತ್ರೆ, ರೂಂ ಕ್ಲೀನ್, ಬಟ್ಟೆ ವಾಷಿಂಗ್, ಇಸ್ತ್ರಿ… ಎಲ್ಲವೂ ನನ್ನದೆ. ಜೊತೆಗೆ ಕಳೆದ 5-6 ವರ್ಷಗಳಿಂದ ಎರಡು ದೇಶಗಳಿಗೆ ಹೋಗಲೇಬೇಕು ಎಂದು ಆಸೆ ಪಡುತ್ತಿದ್ದೆ. ಒಂದು ವರ್ಷದಿಂದ ತೀವ್ರ ಪ್ರಯತ್ನ ನಡೆಸಿದ್ದೆ. ಈಗ ಎರಡೂ ದೇಶಗಳ ರಾಯಭಾರಿಗಳನ್ನು ಕಂಡು ನನ್ನ ಉದ್ದೇಶ ವಿವರಿಸಿದ್ದೇನೆ. ಅವರು ವೀಸಾ ಕೊಡುವ ಬಗ್ಗೆ ಭರವಸೆ ನೀಡಿದ್ದಾರೆ. ಅದಕ್ಕೆ ಬೇಕಾದ ದಾಖಲೆಗಳನ್ನು ಹೊಂದಿಸಲು ಪರದಾಡುತ್ತಿದ್ದೇನೆ. ನವೆಂಬರ್-ಡಿಸೆಂಬರ್ ವೇಳೆಗೆ ಅಲ್ಲಿಗೆ ಹೋಗಬೇಕಾದರೆ ಅಷ್ಟರಲ್ಲಿ ಈಗ ಬರೆಯುತ್ತಿರುವ ಪುಸ್ತಕ ಮುಗಿಸಬೇಕು. ತಲೆಕೆಳಗಾದರೂ ಅಕ್ಟೋಬರ್ 20ರೊಳಗೆ ಪುಸ್ತಕ ಮುಗಿಸಲೇಬೇಕು. ಏಕೆಂದರೆ ನಂತರ 10 ದಿನ ರಜೆ ಹಾಕಿ, ನಾನು ಅಪ್ಪನಾಗುವ ಸಂಭ್ರಮ ಅನುಭವಿಸಬೇಕು!. ಆಗ ನೋವಿನಲ್ಲಿ ಒದ್ದಾಡುವ ನನ್ನ ಜೀವನ ಸಂಗಾತಿ ಅರ್ಪಿತಾಳ ಜೊತೆ ಇರಬೇಕು. ನಂತರ ಎಲ್ಲವೂ ಸರಿ ಹೋದರೆ ಒಂದು ತಿಂಗಳ ಸುದೀರ್ಘ ಪ್ರವಾಸಕ್ಕೆ ಸಜ್ಜಾಗಬೇಕು. ಅದಕ್ಕೆ ಬೇಕಾದ ಹಣ ಗೆಳೆಯರಿಂದ ಹೊಂದಿಸಿಕೊಳ್ಳಬೇಕು. ಅಲ್ಲಿನ ಮಾಹಿತಿ ಸಂಗ್ರಹಿಸಿ, ನೋಟ್ಸ್ ಮಾಡಿಕೊಳ್ಳಬೇಕು. ಅಲ್ಲಿ ಇರುವುದು ಎಲ್ಲಿ? ಯಾರನ್ನೆಲ್ಲಾ ಭೇಟಿ ಮಾಡಬೇಕು ಎಂದು ಪ್ಲಾನಿಂಗ್ ಮಾಡಿಕೊಳ್ಳಬೇಕು.

ಈ ನಡುವೆ ದೆಹಲಿಗೆ ವಿದಾಯ ಹೇಳಿ ಬೆಂಗಳೂರಿಗೆ ಹೊರಡುವ ಸಾಧ್ಯತೆಗಳಿವೆ. ಆದಷ್ಟೂ ನನ್ನನ್ನು ದೆಹಲಿಯಲ್ಲೇ ಬಿಡಿ ಎಂದು ಕೇಳಿಕೊಂಡಿದ್ದೇನೆ. ಆ ಮನವಿಗೆ ಮನ್ನಣೆ ಸಿಗದಿದ್ದರೆ ಇಲ್ಲಿಂದ ಗಂಟುಮೂಟೆ ಕಟ್ಟಬೇಕು. ಬೆಂಗಳೂರಿನಲ್ಲಿ ಮನೆ ಹುಡುಕುವುದು, ಇಲ್ಲಿಂದ ಸಾಮಾನು ಸಾಗಿಸುವುದು ಹೇಗೆ ಎಂಬ ಚಿಂತೆ. ಯಾವಾಗ ಕಚೇರಿಯಿಂದ ಅಂತಿಮ ನಿರ್ಧಾರ ಹೊರ ಬೀಳುತ್ತದೋ ಎಂಬ ನಿರೀಕ್ಷೆ. ಇದೆಲ್ಲದರ ನಡುವೆ ಗಂಟೆಗೆ 10-15 ಫೋನ್ ಕಾಲ್ ಗಳ ಹಾವಳಿ. ಇಷ್ಟೆಲ್ಲಾ ಮಾಡಿ, ಮಲಗಲು ಸಿಗುವುದೇ ಹೆಚ್ಚೆಂದರೆ 5 ರಿಂದ 6 ಗಂಟೆ. ದಿನಕ್ಕೆ 18 ಗಂಟೆ ದುಡಿದು, ಇನ್ನು ಯಾವ ಸುಖಕ್ಕೆ ಈ ಫೇಸ್ ಲೆಸ್ ಬ್ಲಾಗ್ ನಡೆಸಬೇಕು? ಕಂಡವರ ವಿರುದ್ಧ ಬರೆಯಬೇಕು? ಅದರಿಂದ ನನಗಾಗುವ ಲಾಭವೇನು? ದಿನಕ್ಕೊಂದು ಪೋಸ್ಟ್ ನನ್ನ ಈ ಬ್ಲಾಗ್ನಲ್ಲಿ ಬರೆಯುವುದಕ್ಕಿಂತ, ಅದೇ ಸಮಯವನ್ನು ಬೇರೆ ವಿಷಯದ ಬಗ್ಗೆ ಬರೆಯಲು ಉಪಯೋಗಿಸಿದರೆ ಮತ್ತೊಂದು ಪುಸ್ತಕ ಬರೆಯಬಹುದು ಎಂಬ ನಿಲುವಿನವನು ನಾನು. ಹೀಗಾಗಿಯೇ ನನ್ನ ಚಿಂತನಗಂಗಾ ಹಾಗೂ ಕನ್ನಡ ಬುಕ್ ಬ್ಲಾಗ್ ಗಳನ್ನು ತಿಂಗಳುಗಳಿಂದ ನನಗೆ ಅಪ್ ಡೇಟ್ ಮಾಡಲಾಗಿಲ್ಲ. ನನ್ನ ಈ ಬ್ಲಾಗನ್ನೂ ನಡೆಸಲಾಗದೆ ನಿಲ್ಲಿಸಬೇಕು ಎಂದು ಯೋಚಿಸಿದ್ದಾಗ, ಔಟ್ ಲುಕ್ ನ ಕೃಷ್ಣಪ್ರಸಾದ್ ಅವರು ನನ್ನ ಅಜ್ಞಾನ ಹೋಗಲಾಡಿಸಿದ್ದರು. ಒಂದು ಬ್ಲಾಗ್ ಗೆ ಒದ್ದಾಡುತ್ತಿರುವ ನಾನು ಇನ್ನು ಹೇಗೆ 3-4 ಫೇಸ್ ಲೆಸ್ ಬ್ಲಾಗ್ ನಡೆಸಲಿ? ನನಗೆಲ್ಲೋ ಅಮಾನುಷ ಶಕ್ತಿ ಬಂದಿರಬಹುದು! ನಾನು ಸರ್ವಾಂತರ್ಯಾಮಿಯಾಗಿರಬಹುದೆ? ಸುದ್ದಿಮಾತು, ವಿಮರ್ಶಕಿ, ಸುದ್ದಿ ಸ್ಪೋಟಕ ಬ್ಲಾಗ ಗಳನ್ನು ತಡವಿದ್ದೇ ನಾನು ಮಾಡಿದ ತಪ್ಪೇ? ಎಂಬ ಅನುಮಾನ ನನಗೇ ಹುಟ್ಟುವ ಮಟ್ಟಿಗೆ ಈ ವಿಸ್ಪರಿಂಗ್ ಕ್ಯಾಂಪೇನ್ ಸಾಗಿತ್ತು.

ಅಲ್ಲದೆ ನಾನು ಆ ಹಿರಿಯರಿಗೆ ನನ್ನ ಯಾವುದೇ ಪುಸ್ತಕ ಬಿಡುಗಡೆ ಮಾಡಿಕೊಡಿ ಎಂದು ಕೇಳಿರಲಿಲ್ಲ. ಬದಲಿಗೆ ನನ್ನ ಜಲಿಯನ್ ವಾಲಾ ಬಾಗ್ ಹಾಗೂ ಚಂದ್ರಯಾನ ಪುಸ್ತಕಗಳ ಬಿಡುಗಡೆಗೆ ಒಂದು ಸ್ಥಳ ಹುಡುಕುತ್ತಿದ್ದೇನೆ. ನಿಮಗೆ ಯಾವುದಾದರೂ ಹಾಲ್ ಗೊತ್ತಿದ್ದರೆ ತಿಳಿಸಿ ಎಂದು ಕೇಳಿದ್ದೆ. ಕೊನೆಗೆ ಅವರೇ ಎಲ್ಲರೂ ಸೇರಿ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣ ಗುರುತು ಮಾಡಿ ಕೊಟ್ಟಿದ್ದರು. ದುಡ್ಡನ್ನೂ ಅವರೇ ಕೊಟ್ಟಿದ್ದರು. ನಾನು ಪುಸ್ತಕ ಬಿಡುಗಡೆಯಾದ ದಿನ ಬಾಡಿಗೆ ಮೊತ್ತ 750 ರೂ. ಅವರಿಗೆ ಕೊಟ್ಟಿದ್ದೆ. ಇಷ್ಟೆಲ್ಲಾ ಸಹಾಯ ಮಾಡಿದ್ದ ಆ ಮಿತ್ರರು ಈಗ ಏಕೆ ಈ ರೀತಿ ತಪ್ಪು ಭಾವನೆ ತಳೆದಿದ್ದಾರೆ ಎಂದು ಅರ್ಥವಾಗಲಿಲ್ಲ. ಅದರಲ್ಲೂ ನನ್ನ ಖಾಸಗಿ ಬದುಕಿನ ದುರಂತವನ್ನು, ನನ್ನ ನೋವನ್ನು, ನನ್ನ ಮಾನಸಿಕ ಸ್ಥಿತಿಯನ್ನು ತಮಾಷೆ ಮಾಡುವಂತೆ ಅದನ್ನೆಲ್ಲಾ ಜಗಜ್ಜಾಹೀರು ಮಾಡುತ್ತಿದ್ದದ್ದು ನನಗೆ ಆಘಾತಕಾರಿಯಾಗಿತ್ತು. ತಕ್ಷಣ ಫೋನ್ ಮಾಡಿ, ಆ ದಿನ ಪತ್ರಿಕೆಯ ಹಿರಿಯರಿಗೆ ಬೆಂಡೆತ್ತಿ ಎಂದು ಮಿತ್ರರೊಬ್ಬರು ಹೇಳಿದರು. ಆದರೆ ಅವರಿಗೆ ನನ್ನ ವಿರುದ್ಧ, ನನ್ನ ಖಾಸಗಿ ಬದುಕಿನ ದುರಂತವನ್ನು ಪ್ರಚಾರ ಮಾಡಿ, ಸಂತೋಷ ಸಿಗುವುದಾದರೆ ಸಿಗಲಿ ಎಂದು ಸುಮ್ಮನಾದೆ.

ಸ್ಪೋಟಕ ಸುದ್ದಿ ಆರಂಭವಾಗಿ, ಎಲ್ಲಾ ಫೇಸ್ ಲೆಸ್ ಬ್ಲಾಗ್ ಗಳ ಬಗ್ಗೆ ಬರೆದಾಗಲೇ ಬೆಂಗಳೂರಿನ ಸೈಬರ್ ಕ್ರೈಂನಲ್ಲಿರುವ ಡಿಸೋಜಾ ಅವರಿಗೆ ಫೋನ್ ಮಾಡಿ, ನನ್ನ ಸಮಸ್ಯೆ ಹೇಳಿ, ಈ ರೀತಿ ಬ್ಲಾಗ್ ನಡೆಸುತ್ತಿರುವವರು ಯಾರು ಎಂದು ಕೇಳಿ ದೂರು ನೀಡುವ ಬಗ್ಗೆ ವಿಚಾರಿಸಿದ್ದೆ. ಅದರ ಮರುದಿನ ಬೆಂಗಳೂರಿನ ಸೈಬರ್ ಕ್ರೈಂಗೆ ವರದಿಗಾರ ಮಿತ್ರರೊಬ್ಬರು ಫೋನ್ ಮಾಡಿ, ನನ್ನ ಹೆಸರನ್ನೇ ಹೇಳಿ ವಿಚಾರಿಸಿದ್ದು ತಿಳಿಯಿತು. ಆ ಕರೆ ಮಾಡಿದ್ದ ವರದಿಗಾರ ಯಾರು ಎಂದು ತಿಳಿಯುತ್ತಿದ್ದಂತೆಯೇ, ನನ್ನ ವಿರುದ್ದ ನಡೆಯುತ್ತಿರುವ ಷಡ್ಯಂತ್ರದ ಪೂರ್ತಿ ಚಿತ್ರಣ ಸಿಕ್ಕು ಬಿಟ್ಟಿತ್ತು. ಅಲ್ಲದೆ ಮೊದಲ ಲೇಖನದಲ್ಲೇ ನನ್ನ ಹೆಸರು ಬಳಸಿದ್ದನ್ನು ಪ್ರಶ್ನಿಸಿ, ಸ್ಪೋಟಕ ಸುದ್ದಿಗೆ ಆರಂಭದ ಒಂದೆರಡು ದಿನದಲ್ಲೇ ಮೇಲ್ ಕಳುಹಿಸಿದ್ದೆ. ಉತ್ತರ ಬರಲಿಲ್ಲ. ಇದನ್ನೆಲ್ಲಾ ನನಗೆ ವಿಷಯ ತಿಳಿಸಿದ ಇಂಗ್ಲೀಷ್ ಚಾನೆಲ್  ನ ಆ ಮಿತ್ರನಿಗೆ ಹೇಳಿದೆ. ಹಾಗಾದರೆ ನಿಮ್ಮ ವಿರುದ್ಧ ವ್ಯವಸ್ಥಿತ ‘ವಿಸ್ಪರಿಂಗ್ ಕ್ಯಾಂಪೇನ್’ ನಡೀತಿದೆ. ಹುಷಾರಾಗಿರಿ ಎಂದರು. ಮಾಡಿಕೊಂಡ್ರೆ ಮಾಡ್ಲಿ ಬಿಡಿ ಎಂದು ಸುಮ್ಮನಾದೆ.

ಆದರೆ ಅದು ಅಲ್ಲಿಗೆ ನಿಲ್ಲದೆ ಮುಂದುವರೆಯಿತು. ನಂತರ ಈ ಮಿತ್ರನ ಜೊತೆ ಎರಡು ಮೂರು ಬಾರಿ ಚರ್ಚಿಸಿ, ನನ್ನ ವಿರುದ್ಧ ಅನುಮಾನ ಪಡುತ್ತಿದ್ದವರನ್ನು ನೇರವಾಗಿಯೇ ಮಾತನಾಡಿಸಿ, ಇದನ್ನೆಲ್ಲಾ ನಿಲ್ಲಿಸಿ. ಸುಮ್ಮನೇ ಇಂತಹವರು ನಿಮಗೆ ಮಿಸ್ ಗೈಡ್ ಮಾಡಿದ್ದಾರೆ ಎಂದು ಹೇಳೋಣ ಎಂದು ನಿರ್ಧರಿಸಿದೆವು. ಸುಮಾರು 8-10 ಕರೆ ಮಾಡಿದೆ. ಆದರೆ ಅವರು ಬ್ಯುಸಿ ಇದ್ದದ್ದರಿಂದ ಕರೆ ಸ್ವೀಕರಿಸಲಿಲ್ಲವಂತೆ. ವಾಪಸ್ ಕರೆ ಕೂಡ ಮಾಡಲಿಲ್ಲ. ವಿಸ್ಪರಿಂಗ್ ಕ್ಯಾಂಪೇನ್ ನಿಲ್ಲಲಿಲ್ಲ. ಚಾರಿತ್ರ್ಯವಧೆ ಮುಂದುವರಿದೇ ಇತ್ತು. ಕೊನೆಗೆ ಆ ವ್ಯಕ್ತಿಯ ಕಿರಿಯ ಗೆಳೆಯೊಬ್ಬನಿಗೆ ಫೋನ್ ಮಾಡಿ, ಏನು ನಿಮ್ಮ ಗುರುಗಳು ಹೀಗೆ ಮಾಡ್ತಿದ್ದಾರೆ ಎಂದು ಕೇಳಿದೆ. ಅವರು ನನಗೇನೂ ಗೊತ್ತಿಲ್ಲ. ಫೋನ್ ಮಾಡಿ, ನನಗೂ ವಿಚಾರಿಸಿದ್ರು. ಎಂದು ಹೇಳಿದ.

ಆತನೊಡನೆ ಮಾತನಾಡಿದ್ದರಿಂದ ತಿಳಿದು ಬಂದದ್ದು ಏನೆಂದರೆ ಇವನಿಗೂ ಈ ವಿಷಯವೆಲ್ಲ ಮೊದಲೇ ತಿಳಿದಿದ್ದರೂ ನನಗೆ ಅದನ್ನು ತಿಳಿಸಿರಲಿಲ್ಲ. ಬದಲಿಗೆ ನನ್ನ ವಿರುದ್ದ ಅನುಮಾನ ಹೆಚ್ಚುವಂತೆ ತನ್ನ ಗುರುಗಳಿಗೆ ಮಾಹಿತಿ ನೀಡಿದ್ದ. ತನ್ನ ಕೆಲ ಪೊಲೀಸ್ ಮಿತ್ರರಿಗೂ ಫೋನ್ ಮಾಡಿ, ನನ್ನ ಹೆಸರು ಹೇಳಿಯೇ ವಿಚಾರಿಸಿ, ತನಿಖೆ ಆರಂಭಿಸಿದ್ದ. ಈ ಎಲ್ಲವೂ ತಿಳಿದಿದ್ದರೂ, ಸಹಜವಾಗಿ ಕೇಳಿ ಸುಮ್ಮನಾದೆ. ಏಕೆಂದರೆ ನನಗೆ ಈ ಮಿತ್ರನ ಬಗ್ಗೆ ಯಾವುದೇ ಧ್ವೇಷವೂ ಇಲ್ಲ. ಆದರೆ ಮನಸ್ಸಿಗೆ ನೋವಾಗಿದ್ದಂತೂ ನಿಜ. ಏಕೆಂದರೆ ನಿತ್ಯ ಒಂದೆರಡು ಬಾರಿಯಾದರೂ ಸಿಗುವ ಈ ವರದಿಗಾರ ಗೆಳೆಯ ನನ್ನ ಬಗ್ಗೆ ಯಾರೋ ಅನುಮಾನ ಪಡುತ್ತಿದ್ದಾರೆ ಎಂದು ತಿಳಿದಾಗ ಅದನ್ನು ನನ್ನ ಗಮನಕ್ಕೆ ತರದೆ, ವಿಸ್ಪರಿಂಗ್ ಕ್ಯಾಂಪೇನ್ಗೆ ಕೈ ಜೋಡಿಸಿದನಲ್ಲ ಎಂದು. ಆ ರೀತಿ ನಿಜಕ್ಕೂ ನನ್ನ ವಿರುದ್ಧ ದಾಖಲೆಗಳಿದ್ದರೆ, ಐ.ಪಿ. ಅಡ್ರೆಸ್ ಇದ್ದಿದ್ದರೆ ನೇರವಾಗಿ ನನ್ನ ವಿರುದ್ಧ ದೂರು ನೀಡಬಹುದಿತ್ತು. ಅಥವಾ ನನಗೆ ಕರೆ ಮಾಡಿ, ಬೋ.ಮ. ಎಂದು ವಿಚಾರಿಸಬಹುದಿತ್ತು. ಆದರೆ ಇಂತಹ ಕೆಲಸಕ್ಕೆ ಕೈ ಹಾಕಿದ್ದು ಖಂಡಿತಾ ಬೇಸರ ಉಂಟು ಮಾಡಿತ್ತು. ನಾನೇ ಫೋನ್ ಮಾಡಿದಾಗಲಾದರೂ ಆ ಹಿರಿಯ ವರದಿಗಾರ ಮಿತ್ರರು ಮಾತನಾಡಬಹುದಿತ್ತು. ಅಥವಾ ನಂತರ ಕರೆ ಮಾಡಬಹುದಿತ್ತು. ಅದಾವುದನ್ನೂ ಮಾಡದೆ, ನಾನು ಹೇಗೆ? ಏನು? ಎತ್ತ? ಎಂದು ನನ್ನ ಖಾಸಗಿ ವಿಷಯವೆಲ್ಲ ತಿಳಿದಿದ್ದರೂ, ಯಾರದೋ ದ್ವೇಷದ ಮಾತು ಕೇಳಿ ನನ್ನ ಮೇಲೆ ಅನುಮಾನ ಬರುವಂತೆ ಮಾಡ ಹೊರಟಿದ್ದು, ನಿಜಕ್ಕೂ ಬೇಸರ ಮೂಡಿಸಿತ್ತು.

ಇದೆಲ್ಲವನ್ನು ವಿವರಿಸಿ, ಸ್ಪೋಟಕ ಸುದ್ದಿಗೆ ಮತ್ತೆ ಮೇಲ್ ಕಳುಹಿಸಿದೆ. ಅದನ್ನೇ ಕಾಮೆಂಟ್ ರೂಪದಲ್ಲೂ ಅವರ ಬ್ಲಾಗ್ ಗೆ ಕಳುಹಿಸಿದೆ. ಅದು ಪ್ರಕಟವಾಗಲು ಇಲ್ಲ. ಮೇಲ್ ಗೆ ಉತ್ತರವೂ ಬರಲಿಲ್ಲ. ಇದನ್ನೆಲ್ಲಾ ತುಂಬಾ ಸುದೀರ್ಘವಾಗಿ ನನ್ನ ಹಿರಿಯ ಮಿತ್ರರೊಂದಿಗೆ ಚರ್ಚಿಸಿದೆ. ಅವರು ತಮಗೆ ತೋಚಿದ ಕೆಲವು ವಿಚಾರ ಹೇಳಿ, ಇಲ್ಲಿಗೆ ಬಿಟ್ಟು ಬಿಡುವುದು ವಾಸಿ ಎಂದರು. ಹಾಗೆಯೇ ನನ್ನ ಇತರೆ ಕೆಲವು ಮಿತ್ರರ ಜೊತೆ ಚರ್ಚಿಸಿದಾಗ ದೂರು ನೀಡುವುದು ವಾಸಿ ಎಂದು ಹೇಳಿದರು. ಹೀಗಾಗಿ ಅಂತಿಮವಾಗಿ ಬೇರಾವುದೇ ದಾರಿ ಕಾಣದೆ ಸ್ಪೋಟಕ ಸುದ್ದಿ ಬ್ಲಾಗ್ ವಿರುದ್ಧ ದೂರು ದಾಖಲಿಸಿ, ಬಂದಿದ್ದೇನೆ. ಈ ರೀತಿ ನಿಮ್ಮ ವಿರುದ್ಧ ದೂರು ದಾಖಲಿಸಿದ್ದೇನೆ ಎಂದು ಸ್ಪೋಟಕ ಸುದ್ದಿಗೆ ಮತ್ತೊಂದು ಮೇಲ್ ಕಳುಹಿಸಿ ಒಂದು ದಿನದ ಮೇಲಾಗಿದೆ. ಅದಕ್ಕೂ ಉತ್ತರ ಬಂದಿಲ್ಲ. ಹೀಗಾಗಿ ಇದನ್ನೀಗ ನನ್ನ ಬ್ಲಾಗ್ ನಲ್ಲಿ ಪ್ರಕಟಿಸುತ್ತಿದ್ದೇನೆ. 

ಈ ಫೆಸ್ ಲೆಸ್ ಬ್ಲಾಗ್ ಗಳ ವಿರುದ್ಧವಾದರೂ ಹೋರಾಡಬಹುದು. ಆದರೆ ಜೊತೆಗೇ ಇದ್ದುಕೊಂಡು, ನಾವು ಏನು ಎಂದು ತಿಳಿದೂ ಸುಖಾ ಸುಮ್ಮನೇ ವಿಸ್ಪರಿಂಗ್ ಕ್ಯಾಂಪೇನ್ ಮಾಡುವವರ ಬಗ್ಗೆ ಏನು ಮಾಡಬೇಕೋ ಅರ್ಥವಾಗುತ್ತಿಲ್ಲ. ಹಾಗಾಗಿ ಅವರಿಗೇ ಅರ್ಥವಾಗಲಿ ಎಂದು ಸುಮ್ಮನಾಗಿದ್ದೇನೆ. ಇದನ್ನು ಓದಿದ ಮೇಲಾದರೂ ಅವರಿಗೆ ಅರ್ಥವಾದೀತು. ಯಾರದ್ದೋ ಮಾತು ಕೇಳಿ, ಮತ್ತ್ಯಾರದ್ದೋ ಮೇಲೆ ಅನುಮಾನ ಪಡುವುದರಿಂದ ಏನೇನಾಗುತ್ತದೆ ಎಂದು ತಿಳಿದೀತು. ಯಾರ ಮಾತನ್ನೋ ಸುಲಭಕ್ಕೆ ನಂಬಿ, ಸುಮ್ಮನೇ ಕೆಲಸ ಮಾಡಿಕೊಂಡಿರುವವರ  ಬಗ್ಗೆ ಅನುಮಾನ ಪಡಬಾರದು ಎಂಬ ಸೂಕ್ಷ್ಮ ಅರ್ಥವಾದಿತು ಎಂದು ಭಾವಿಸಿದ್ದೇನೆ. ಇದೆಲ್ಲಾ ಕೇವಲ ಯಾವುದೋ ಒಬ್ಬ ಪತ್ರಕರ್ತ ಅವರಲ್ಲಿ ತಪ್ಪು ಭಾವನೆ ಬರುವಂತೆ ಮಾಡಿದ್ದು ಕಾರಣವೇ ಹೊರತು ಬೇರೇನೂ ಅಲ್ಲ.

ಈಗಲೂ ಈ ಇಬ್ಬರು ಹಿರಿಯ ಪತ್ರಕರ್ತರು ಹಾಗೂ ಈ ಕಿರಿಯ ಮಿತ್ರನ ಬಗ್ಗೆ ಅಷ್ಟೇ ಗೌರವ, ಪ್ರೀತಿ ಇದೆ. ವಿಶ್ವಾಸ ಕದಡಲು ನಾನು ಬಿಟ್ಟಿಲ್ಲ. ಆದರೆ ಇದನ್ನೆಲ್ಲಾ ಹೇಳುವ ಅನಿವಾರ್ಯತೆ ಇದ್ದದ್ದರಿಂದ ಹೇಳಬೇಕಾಯಿತು. ಈ ಎಲ್ಲಾ ಕಾರಣದಿಂದ ಸ್ಪೋಟಕ ಸುದ್ದಿ ವಿರುದ್ಧ ದೂರು ದಾಖಲಿಸಿ ಬಂದಿದ್ದೇನೆ. ಇದು ಎಲ್ಲಿ, ಹೇಗೆ, ಯಾವತ್ತು ಕೊನೆಯಾಗುತ್ತದೋ ಗೊತ್ತಿಲ್ಲ.

The URI to TrackBack this entry is: https://shivaprasadtr.wordpress.com/2009/08/29/%e0%b2%b8%e0%b3%81%e0%b2%a6%e0%b3%8d%e0%b2%a6%e0%b2%bf-%e0%b2%b8%e0%b3%8d%e0%b2%aa%e0%b3%8b%e0%b2%9f%e0%b2%95%e0%b2%a6-%e0%b2%b5%e0%b2%bf%e0%b2%b0%e0%b3%81%e0%b2%a6%e0%b3%8d%e0%b2%a7-%e0%b2%a6/trackback/

RSS feed for comments on this post.

7 ಟಿಪ್ಪಣಿಗಳುನಿಮ್ಮ ಟಿಪ್ಪಣಿ ಬರೆಯಿರಿ

  1. ಬೆನ್ನಿಗೆ ಚೂರಿ ಜಹಾಕುವುದು ಎಂದರೆ ಇದೇ….ಅಂತೂ ಒಳ್ಳೆಯ ಕೆಲಸ ಮಾಡಿದ್ದಿರ…

  2. ಸರ್, ನಿಮ್ಮ ಮೇಲೆ ಗಾಸಿಪ್ ಆದರೆ ಆ ಬ್ಲಾಗ್ ಮೇಲೆ ದೂರು ದಾಖಲಿಸಿದ್ದೇಕೆ? ನಿಮ್ಮ ಮೇಲೆ ವಿಸ್ಪರಿಂಗ್ ಕ್ಯಾಂಪೇನ್ ಮಾಡಿ ಸುಳ್ಳು ಅಪಪ್ರಚಾರ ಮಾಡಿದವರ ಮೇಲೆ ದೂರು ನೀಡಬೇಕಲ್ಲವೆ? ಸುದ್ದಿ ಸ್ಪೋಟಕ ಬ್ಲಾಗ್ ಮೇಲೆ ಯಾವ ಆಧಾರದ ಮೇಲೆ ಅಥವಾ ಅವರು ಏನು ಕ್ರೈಂ ಮಾಡಿದ್ದಾರೆ ಎಂದು ದೂರು ನೀಡಿದ್ದೀರಿ?

  3. good job !

  4. ಆರೋಪ ಮಾಡುವವರು, ಗಾಸಿಪ್ ಮಾಡುವವರು ಎಲ್ಲಾ ಕಾಲದಲ್ಲೂ, ಎಲ್ಲಾ ದೇಶದಲ್ಲೂ ಇದ್ದೇ ಇರ್ತಾರೆ ಮಾರಾಯ. ಹಾಳಾಗಿ ಹೋಗ್ಲಿ ಬಿಡು. ನಿನ್ನ ಪುಸ್ತಕದ ಬಗ್ಗೆ ಗಮನ ಕೊಡು. ಸ್ವಲ್ಪ ತಡವಾದ್ರೂ ಅಂತಿಮವಾಗಿ ಗಲ್ಲೋದು ಸತ್ಯ ತಾನೇ?

  5. ಬಗಿದ್ದ್ರೆ ಬೆನ್ನ ಮೇಲೆ ಎರಡೂ ಗುದ್ದು ಜಾಸ್ತಿನೇ ಬಿಳೋದು, ಸರಿಯಾಗಿ ಮಾಡಿದ್ದಿರಿ.

    ಹಾಗೆಯೇ ಇಬ್ಬರು ಹಿರಿಯ ಪತ್ರಕರ್ತರು ಹಾಗೂ ಕಿರಿಯ ಮಿತ್ರರಿಗೂ ತಿಳಿಸಿ ಹೇಳಿ

    -ಶೆಟ್ಟರು

  6. ರಾಮು said
    ಶಾಂತವಾಗು ಮನವೆ, ತಲ್ಲಣಿಸಬೇಡ’

  7. ಸಾರ್ ನೀವು ಸಿಬಿಐಗೆ ಕಂಪ್ಲ್ಂಟ್ ಕೊಟ್ಟಿದ್ದರಿಂದ ಹೆದರಿ ಸುದ್ದಿಸ್ಪೋಟ ಬಾಗಿಲು ಹಾಕಿದೆ ನೊಡಿದ್ರಾ ಶಿವಪ್ರಸಾದ್


ನಿಮ್ಮ ಟಿಪ್ಪಣಿ ಬರೆಯಿರಿ