ವಾಟ್ ಇಸ್ ರಿಯಲ್ ದೇವೇಗೌಡ?

election5ಮೊನ್ನೆ ದೆಹಲಿಗೆ ಬಂದಿದ್ದ ಸಿದ್ಧರಾಮಯ್ಯ ಆರಾಮವಾಗಿ ಮಾತಿಗೆ ಸಿಕ್ಕಿದ್ದರು. ಮದ್ಯಾಹ್ನ ಊಟ ಮಾಡುತ್ತ ಜೊತೆಗಿದ್ದ ಪತ್ರಕರ್ತರಿಗೆ ಕೆಲ ಸ್ವಾರಸ್ಯಕರ ಘಟನೆಗಳನ್ನು ಹೇಳುತ್ತಿದ್ದರು. ಅವುಗಳಲ್ಲಿ ಒಂದು ಇಲ್ಲಿದೆ.

ಅದು ದೇವೇಗೌಡರು ಪ್ರಧಾನಿಯಾಗಿದ್ದ ಕಾಲ. ಇಬ್ರಾಹಿಂ ಕೇಂದ್ರ ಸಚಿವರಾಗಿದ್ದರು. ಅಮೇರಿಕಾದಿಂದ  ನಿಯೋಗವೊಂದು ಬಂದಿತ್ತು. ನಿಯೋಗದಲ್ಲಿದ್ದ ಹೈ ಕಮೀಷನರ್ ಒಬ್ಬರು ಇಬ್ರಾಹಿಂ ಜೊತೆ ಲೋಕಾಭಿರಾಮವಾಗಿ ಮಾತನಾಡುತ್ತ ದೇವೇಗೌಡರ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ತಿಳಿದುಕೊಳ್ಳ ಬಯಸಿದರಂತೆ. ಇಬ್ರಾಹಿಂಗೆ ‘ವಾಟ್ ರಿಯಲಿ ದೇವೇಗೌಡ ಈಸ್’ (ನಿಜಕ್ಕೂ ದೇವೇಗೌಡ ಅಂದರೆ ಏನು?) ಎಂದು ಕೇಳಿದರಂತೆ. ಅದಕ್ಕಇಬ್ರಾಹಿಂ ಅದನ್ನ ಅಷ್ಟು ಸುಲಭವಾಗಿ ಹೇಳಲು ಆಗೋಲ್ಲ. ರಾತ್ರಿ ಡಿನ್ನರ್ ಪಾರ್ಟಿಗೆ ಬರ್ತೀರಲ್ಲ, ಆಗ ಎಕ್ಲ್ಪೇನ್ ಮಾಡ್ತೀನಿ ಅಂದ್ರಂತೆ.

ರಾತ್ರಿ ಡಿನ್ನರ್ ಪಾರ್ಟಿ ಶುರುವಾಯ್ತು. ಮೊದಲೇ ನಮ್ಮ ದೇವೇಗೌಡರ ಡಿನ್ನರ್ ಪಾರ್ಟಿ! ವಿಶೇಷ ಖಾದ್ಯವಾಗಿ ಮುದ್ದೆ ಮಾಡಿಸಲಾಗಿತ್ತು.  ಹೈ ಕಮೀಷನರ್ ಇಬ್ರಾಹಿಂ ಬಳಿ ಬಂದು ಮುದ್ದೆ ತೋರಿಸಿ  ವಾಟ್ ಈಸ್ ದಿಸ್ ಎಂದರಂತೆ. ಇಬ್ರಾಹಿಂ ಟೇಸ್ಟ್ ಇಟ್ ಅಂದರಂತೆ. ಹೈ ಕಮೀಷನರ್ ಗೆ ಮುದ್ದೆ ತಿನ್ನುವುದು ಎಂದು ತಿಳಿಯಲಿಲ್ಲ. ಪ್ರಶ್ನಾರ್ಥಕ ಚಿಹ್ನೆಯಂತೆ ಮುಖ ಮಾಡಿಕೊಂಡು ಇಬ್ರಾಹಿಂ ಕಡೆ ನೋಡಿದರಂತೆ. ಸಮಸ್ಯೆ ಅರಿತ ಇಬ್ರಾಹಿಂ ಮುದ್ದೆ ಮುರಿದು ಬಾಯಿಗೆ ಹಾಕಿಕೊಂಡು ಹೀಗೆ ಎಂದರಂತೆ. ಸ್ಪೂರ್ತಿ ಪಡೆದ ಹೈ ಕಮೀಷನರ್ ಅದೇ ರೀತಿ ಮಾಡಿ, ಮುದ್ದೆ ಮುರಿದು ಬಾಯಿಗೆ ಹಾಕಿಕೊಂಡರು. ಆದರೆ ಎಂದೂ ಮುದ್ದೆ ತಿಂದು ಅಭ್ಯಾಸವಿಲ್ಲದ ಅವರಿಗೆ ಅದು ಗಂಟಲಲ್ಲೆ ಸಿಲುಕಿತು!

ಇಬ್ರಾಹಿಂ ಕಡೆ ನೋಡಿ, ದಯನೀಯ ಸ್ಥಿತಿಯಲ್ಲಿ, ವಾಟ್ ಈಸ್ ದಿಸ್? ದಿಸ್ ಇಸ್ ನೈದರ್ ಗೋಯಿಂಗ್ ಇನ್ ಸೈಡ್ ನಾರ್ ಕಮಿಂಗ್ ಔಟ್! (ಇದೇನಿದು? ಇದು ಒಳಗೂ ಹೋಗ್ತಿಲ್ಲ, ಹೊರಗೂ ಬರ್ತಿಲ್ಲ) ಎಂದು ಕೇಳಿದರಂತೆ.

ಆಗ ನಸುನಗೆ ಬೀರಿದ ಇಬ್ರಾಹಿಂ ‘ದಿಸ್ ಈಸ್ ರಿಯಲ್ ದೇವೇಗೌಡ’  ಅಂದರಂತೆ.

ಈ ಪ್ರಸಂಗವನ್ನು ಇಬ್ರಾಹಿಂ ಕೆಲ ಭಾಷಣಗಳಲ್ಲೂ ಹೇಳಿದ್ದರು ಎಂದು ನಗುತ್ತಾ ಸಿದ್ಧರಾಮಯ್ಯ ತಮ್ಮ ತಟ್ಟೆಯಲ್ಲಿದ್ದ ಮುದ್ದೆ ಮುರಿದು ಬಾಯಿಗಿಟ್ಟುಕೊಂಡರು.

ಆದರೆ ಅದು ಗಂಟಲಲ್ಲಿ ಸಿಲುಕದೇ ಸೀದಾ ಒಳ ಹೋಯಿತು.

Published in: on ಜುಲೈ 26, 2009 at 4:42 ಅಪರಾಹ್ನ  Comments (9)  
Tags: , , , ,