ಕಲಾಂಜಿಯವರಿಂದ ಪರೀಕ್ಷೆಗೊಳಪಡುವ ಭೀತಿಯಲ್ಲಿ…

kalam-prasad2-poor1ಕಲಾಂಜಿಯವರಿಂದ ಪುಸ್ತಕ ಬಿಡುಗಡೆ ಮಾಡಿಸಬೇಕು ಎಂಬ ಆಸೆಯನ್ನು ಅವರಿಗೆ ತಲುಪಿಸಿದ್ದಾಗಿತ್ತು. ಆದರೆ ವಿವಿಧ ಕಾರಣಗಳಿಂದ ಅದು ಮುಂದೆ ಹೋಗುತ್ತಿತ್ತು. ಕೊನೆಗೆ ಇನ್ನೇನು ಕಲಾಂಜಿಯವರು ಪುಸ್ತಕ ಬಿಡುಗಡೆ ಮಾಡಲಾರರು ಎಂದೇ ಭಾವಿಸಿದ್ದೆವು.
ಈ ನಡುವೆ ಹಲವಾರು ಬೆಳವಣಿಗೆಗಳೂ ಆದವು. ಮೊದಲು ಕಲಾಂಜಿಯವರ ಪಿ.ಎ, ಪ್ರಸಾದ್ ಅವರು, ಕಲಾಂಜಿ ಪುಸ್ತಕ ಬಿಡುಗಡೆ ಮಾಡುವುದಿಲ್ಲ ಎಂದರು. ಆಗ ನಾವು ಪುಸ್ತಕವಾಗಿದ್ದರೆ ನಾವೂ ಕೇಳುತ್ತಿರಲಿಲ್ಲ. ಆದರೆ ಇದು ಚಂದ್ರಯಾನ ಯೋಜನೆ ಕುರಿತ ಪುಸ್ತಕ. ಮೇಲಾಗಿ ಇದನ್ನು ಕಲಾಂ ಅವರಿಗೇ ಅರ್ಪಿಸಿದ್ದೇವೆ. ಹೀಗಾಗಿ ಅವರೇ ಬಿಡುಗಡೆ ಮಾಡಿದ್ದರೆ ತುಂಬಾ ಸಂತೋಷವಾಗುತ್ತಿತ್ತು ಎಂದೆವು. ಕಲಾಂಜಿಗೆ ಪ್ರಸಾದ್ ಈ ವಿಷಯ ತಿಳಿಸಿದಾಗ ಕಲಾಂಜಿ, ಪುಸ್ತಕದ ಸಾರಾಂಶ ಕಳುಹಿಸಲು ಸೂಚಿಸಿದ್ದರು. ನಂತರ ಪ್ರತಿ ಚಾಪ್ಟರ್ನಲ್ಲಿ ಏನೇನಿದೆ ಎಂದು ಇಂಗ್ಲೀಷ್ನಲ್ಲಿ ಪುಸ್ತಕದ ಸಾರಾಂಶ, ಇತರೆ ವಿವರಗಳನ್ನು ತಲುಪಿಸಿದೆವು. 1 ವಾರದಲ್ಲಿ ಮತ್ತೆ ಕಲಾಂ ಪಿ.ಎ.ಪ್ರಸಾದ್ ಅವರ ಫೋನ್ ಬಂತು. ‘ಕಲಾಂ ಅವರಿಗೆ ಪುಸ್ತಕದ ತಿರುಳು ನೋಡಿ ಸಂತೋಷವಾಗಿದೆ. ಅವರು ಒಪ್ಪಿಕೊಳ್ಳಬಹುದು. ಆದರೆ ಅದಕ್ಕೂ ಮುನ್ನ ಅವರು ಇಡೀ ಪುಸ್ತಕವನ್ನು ಒಮ್ಮೆ ನೋಡ ಬಯಸಿದ್ದಾರೆ. ಆ ಪುಸ್ತಕದ ಬಗ್ಗೆ ಕನ್ನಡ ಬಲ್ಲ ಯಾರಿಂದಲಾದರೂ ಸಲಹೆ ಪಡೆದು ನಂತರ ನಿರ್ಧರಿಸುತ್ತಾರೆ’ ಎಂದರು.
ಆದರೆ ಇನ್ನೂ ನಾವೇ ಪುಸ್ತಕ ನೋಡಿರಲಿಲ್ಲ. ಹೀಗಾಗಿ ಬೆಂಗಳೂರಿನಿಂದ ಬರುತ್ತಿದ್ದ ಒಬ್ಬರ ಕೈಯಲ್ಲಿ 5 ಪ್ರತಿ ತರಿಸಿದೆವು. ಕಲಾಂ ಅವರ ಮನೆಗೆ ಹೋಗಿ ಪುಸ್ತಕ ಕೊಟ್ಟೆವು. ಇಡೀ ಪುಸ್ತಕ ಒಮ್ಮೆ ನೋಡಿದ ಪ್ರಸಾದ್ ಅವರು, ‘ಪುಸ್ತಕದಲ್ಲಿ ಕಲಾಂ ಅವರ ಬಗ್ಗೆ ಎಲ್ಲೆಲ್ಲಿ ಬರೆದಿದ್ದೀರಿ, ಗುರುತು ಹಾಕಿ ಕೊಡಿ’ ಎಂದರು. ಸರಿ ಎಂದು ಕಲಾಂ ಅವರ ಹೆಸರು ಇದ್ದ ಪುಟ, ಪ್ಯಾರಾಗಳನ್ನು ಗುರುತು ಮಾಡಿ ಕೊಟ್ಟೆವು. ಆಗ ಪ್ರಸಾದ್, ‘ಕಲಾಂಜಿ, ತಮಗೆ ಗೊತ್ತಿರುವ ಕನ್ನಡಿಗರೊಬ್ಬರಿಗೆ ಈ ಪುಸ್ತಕ ಕೊಟ್ಟು ಅವರ ಸಲಹೆ ಪಡೆಯುತ್ತಾರೆ. ನಂತರ ತಮ್ಮ ನಿರ್ಧಾರ ತಿಳಿಸುತ್ತಾರೆ’ ಎಂದರು.
ನಮಗೋ ಆತಂಕ! ಈ ಪುಸ್ತಕ ಓದುವವರು ಏನು ಹೇಳುತ್ತಾರೋ? ಗೊತ್ತಿಲ್ಲ. ಅವರ ಮಾತು ಕೇಳಿ ಕಲಾಂಜಿ ಪುಸ್ತಕ ಬಿಡುಗಡೆಗೆ ಒಪ್ಪದಿದ್ದರೆ?? ಈ ಆತಂಕದಲ್ಲೇ ಸುಮಾರು 15 ದಿನ ಕಳೆದವು. ಮತ್ತ ಪ್ರಸಾದ್ ಅವರಿಗೆ ಫೋನ್ ಮಾಡಿದಾಗ, ಪುಸ್ತಕದ ಬಗ್ಗೆ ಅದನ್ನು ಓದಿದವರು ಒಳ್ಳೆಯ ಅಭಿಪ್ರಾಯ ಕೊಟ್ಟಿದ್ದಾರೆ. ಕಲಾಂಜಿ ಒಪ್ಪಿದ್ದರೆ. ಮುಂದಿನ ವಾರ ಡೇಟ್ ಡಿಸೈಡ್ ಮಾಡಿ ಹೇಳ್ತೇನೆ ಎಂದರು. ಆದರೆ ಮತ್ತೆ ವಿವಿಧ ಕಾರಣಗಳಿಂದ 10 ದಿನಗಳಾದರೂ ಪುಸ್ತಕ ಬಿಡುಗಡೆಗೆ ಮುಹೂರ್ತ ಕೂಡಿ ಬರಲಿಲ್ಲ.
ಹೀಗಾಗಿ ಏನು ಮಾಡುವುದು ಎಂಬ ಚಿಂತೆಯಲ್ಲೂ ಇದ್ದೆವು. ಆದರೆ ಇದರ ಜವಾಬ್ದಾರಿ ಹೊತ್ತಿದ್ದು ಮಿತ್ರ ವೀರಣ್ಣ ಕಮ್ಮಾರ್. ಅಷ್ಟು ಸುಲಭಕ್ಕೆ ಸುಮ್ಮನಾಗುವವರಲ್ಲ ಅವರು. ದಿನಕ್ಕೊಮ್ಮೆ ಪ್ರಸಾದ್ ಅವರಿಗೆ ಫೋನ್ ಮಾಡಿ, ಇಂದು ಡೇಟ್ ಸಿಗಬಹುದೇ ಎಂದು ವಿಚಾರಿಸುತ್ತಿದ್ದರು. ಕೊನೆಗೆ ಎಷ್ಟು ದಿನಗಳಾದರೂ ತಾಳ್ಮೆ ಕಳೆದುಕೊಳ್ಳದೆ ವೀರಣ್ಣ ಫೋನ್ ಮಾಡುತ್ತಿದ್ದದ್ದನ್ನು ತಮ್ಮ ಸಹಾಯಕರಿಂದ ತಿಳಿದ ಕಲಾಂ ಇನ್ನು ಎರಡು ಮೂರು ದಿನದಲ್ಲಿ ಡೇಟ್ ನಿಗದಿ ಪಡಿಸುವಂತೆ ಪ್ರಸಾದ್ ಅವರಿಗೆ ಸೂಚಿಸಿದ್ದರು. ಹೀಗೆ ಪುಸ್ತಕ ಬಿಡುಗಡೆ ಕಲಾಂ ಅವರಿಂದ ಆಗುವುದಿಲ್ಲ ಎಂಬ ನಮ್ಮ ನಿರೀಕ್ಷೆಗೆ ವಿರುದ್ಧವಾಗಿ ಜನವರಿ 24 ರಂದು ಕಲಾಂ ಅವರ ಪಿ.ಎ. ಪ್ರಸಾದ್ ಫೋನ್ ಮಾಡಿದ್ದರು. ‘ಕಲಾಂಜಿಯವರು ಪುಸ್ತಕ ಬಿಡುಗಡೆಗೆ ಜನವರಿ 27 ಸಂಜೆ 7.30 ಕ್ಕೆ ಸಮಯ ನೀಡಿದ್ದಾರೆ’ ಎಂದು ತಿಳಿಸಿದರು.
ವಿಷಯ ತಿಳಿದು ತಲೆಭಾರ ಇಳಿದಂತಾಗಿತ್ತು. ಏಕೆಂದರೆ ಕಲಾಂ ಅವರು ನಾನು ಬರೆದ ಕನ್ನಡ ಪುಸ್ತಕ ಚಂದ್ರಯಾನ ಬಿಡುಗಡೆ ಮಾಡಲು ಒಪ್ಪಿದ್ದಾರೆ ಎಂಬುದೇ ದೊಡ್ಡ ಗೌರವವಾಗಿತ್ತು. ಕಲಾಂಜಿ ನನ್ನ ಪುಸ್ತಕ ಬಿಡುಗಡೆ ಮಾಡ್ತಾರೆ ಎಂಬ ಥ್ರಿಲ್ನಲ್ಲೇ ನಾಲ್ಕು ದಿನ ಸರಿಯಾಗಿ ನಿದ್ದೆ ಮಾಡದೇ ಹೊರಳಾಡಿ ಬಿಟ್ಟಿದ್ದೆ. ಎದುರಿಗೆ ಸಿಕ್ಕಾಗ ಏನು ಹೇಳಬಹುದು? ಚಂದ್ರಯಾನದ ಪ್ರಮುಖ ರೂವಾರಿಗಳಲ್ಲೊಬ್ಬರಾದ ಕಲಾಂ ಪುಸ್ತಕದ ಬಗ್ಗೆ ಏನು ಕಾಮೆಂಟ್ ಮಾಡಬಹುದು? ಏನಾದರೂ ಇಲ್ಲಿ ತಪ್ಪಾಗಿದೆ ನೋಡಿ ಎಂದು ಬಿಟ್ಟರೆ? ಅಥವಾ ಬೇರೆ ಏನಾದರೂ ಹೇಳಿದರೆ?? ಎಂಬ ಆತಂಕ ಇತ್ತು.
ಇದರ ನಡುವೆಯೇ ಹಿರಿಯ ಪತ್ರಕರ್ತರಾದ ದಿ ವೀಕ್ನ ರೆಸಿಡೆಂಟ್ ಎಡಿಟರ್ ಶ್ರೀ ಸಚ್ಚಿದಾನಂದ ಮೂರ್ತಿ, ಡೆಕ್ಕನ್ ಹೆರಾಲ್ಡ್ ದೆಹಲಿ ಆವೃತ್ತಿ ಮುಖ್ಯಸ್ಥರಾದ ಶ್ರೀ ಅರುಣ್, ಪ್ರಜಾವಾಣಿಯ ಶ್ರೀ ದಿನೇಶ್ ಅಮಿನ್ ಮಟ್ಟು, ಕನ್ನಡಪ್ರಭದ ಶ್ರೀ ಉಮಾಪತಿ, ವಿಜಯ ಕರ್ನಾಟಕದ ಶ್ರೀ ವಿನಾಯಕ್ ಭಟ್ ಇವರೆಲ್ಲ ಪುಸ್ತಕ ಬಿಡುಗಡೆ ಸಂದರ್ಭದಲ್ಲಿ ಹಾಜರಿರಲು ಒಪ್ಪಿದರು.
ಅಂದುಕೊಂಡಂತೆ ಡಿಸೆಂಬರ್ 27 ಬಂತು. ನಾವು ಬೆಳಗಿನಿಂದಲೇ ಮದುವೆಗೆ ಸಿದ್ಧರಾಗುವವರ ಹಾಗೆ ಅದೂ ಇದೂ ಎಂದು ತಲೆ ಕೆಡಿಸಿಕೊಳ್ಳುತ್ತಿದ್ದೆವು. ಆದರೆ ಮದ್ಯಾಹ್ನದ ಹೊತ್ತಿಗೆ ಚಿತ್ರಣವೇ ಬದಲಾಗಿ ಮತ್ತೆ ಆತಂಕ ಕವಿದಿತ್ತು. ಏಕೆಂದರೆ ಮದ್ಯಾಹ್ನದ ಹೊತ್ತಿಗೆ ಮಾಜಿ ರಾಷ್ಟ್ರಪತಿ ವೆಂಕಟರಾಮನ್ ನಿಧರಾಗಿದ್ದರು. ಹೀಗಾಗಿ ಕಲಾಂ ಅವರು ಎಲ್ಲಿ ತಮ್ಮ ಎಲ್ಲಾ ಕಾರ್ಯಕ್ರಮಗಳನ್ನು ರದ್ದು ಪಡಿಸಿ ಬಿಡುತ್ತಾರೋ ಎಂಬ ಆತಂಕ ಮೂಡಿತು. ಆದರೆ ಕಲಾಂ ಅವರ ಕಚೇರಿಯಿಂದ ಈ ಕುರಿತು ಯಾವುದೇ ಕರೆ ಬರಲಿಲ್ಲ. ಹೀಗಾಗಿ 7 ಗಂಟೆ ಹೊತ್ತಿಗೆ ಮತ್ತೆ ನಮ್ಮ ಮುಖದಲ್ಲಿ ಗೆಲುವು ಮೂಡಿತು.
7.15 ರ ಹೊತ್ತಿಗೆ ಕಲಾಂ ಅವರ ನಂ. 10, ರಾಜಾಜಿ ಮಾರ್ಗ ರಸ್ತೆಯ ಮನೆಯಲ್ಲಿದ್ದೆವು. ಕಲಾಂ ಅವರು ಮನೆಯಲ್ಲೇ ಇದ್ದಾರೆ. ಯಾವುದೇ ಕಾರ್ಯಕ್ರಮಗಳು ರದ್ದಾಗಿಲ್ಲ ಎಂದು ತಿಳಿದು, ಇದ್ದ ಆತಂಕವೂ ನಿವಾರಣೆಯಾಯಿತು.
ಆಗ ಸಚ್ಚಿದಾನಂದ ಸರ್ ನನ್ನನ್ನು ಕರೆದು ಹೊಸ ಬಾಂಬ್ ಹಾಕಿದರು. ‘ನೋಡಿ ಶಿವಪ್ರಸಾದ್, ಯಾವುದಕ್ಕೂ ಚಂದ್ರಯಾನ ಯೋಜನೆ ಬಗ್ಗೆ ಒಂದು ಪುಟ ಬರೆಯಲು ಮಾನಸಿಕವಾಗಿ ಸಿದ್ದವಾಗಿರಿ. ಸಾಹೇಬರು (ಕಲಾಂಜಿ) ಪುಸ್ತಕ ಬಿಡುಗಡೆ ಮಾಡ್ತಿದ್ದಂತೆಯೇ ಚಂದ್ರಯಾನದ ಬಗ್ಗೆ ಒಂದು ಪುಟ ಸಾರಾಂಶದ ರೀತಿ ಬರೆದು ತೋರಿಸಿ ಎಂದು ಹೇಳಿದರೂ ಹೇಳಬಹುದು! ಈ ಹಿಂದೆ ಅವರು ರಾಷ್ಟ್ರಪತಿಗಳಾಗಿದ್ದಾಗ ಅವರ ಜೊತೆ ನಾವು ಪ್ರವಾಸಕ್ಕೆ ಹೋಗಿದ್ದೆವು. ಆಗ ನಮ್ಮನ್ನೇ ಬಿಟ್ಟಿರಲಿಲ್ಲ!’ ಎಂದು ಬಿಟ್ಟರು.
ನನಗೆ ಮತ್ತೆ ಚಳಿ ಜ್ವರ ಶುರುವಾಗಿತ್ತು! ಆ ಹಂತದಲ್ಲಿ ಚಂದ್ರಯಾನದ ಬಗ್ಗೆ ಪುಸ್ತಕ ಬರೆದದ್ದು ನನಗೆ ದೊಡ್ಡ ಕೆಲಸವಾಗಿ ಕಾಣಲಿಲ್ಲ. ಆದರೆ ಕಲಾಂಜಿಯವರ ಮುಂದೆ ಒಂದು ಪುಟ ಬರೆದು ತೋರಿಸಬೇಕು! ಎಂದಾಗ ನಡುಕ ಶುರುವಾಗಿತ್ತು. ಅಂತಹ ಮಹಾನ್ ವ್ಯಕ್ತಿಯ ಮುಂದೆ, ವಿಜ್ಞಾನಿಯ ಮುಂದೆ, ವ್ಯಕ್ತಿತ್ವದ ಮುಂದೆ ನಾನು ಒಂದು ಪುಟ ಬರೆದು ಕೊಡಬೇಕು ಎಂದರೆ??? ಇವತ್ತ್ಯಾಕೋ ನನ್ನ ಗ್ರಹಚಾರ ಕೆಟ್ಟಿದೆ ಎಂದುಕೊಂಡೆ. ಅದರಲ್ಲೂ ಸಚ್ಚಿದಾನಂದ ಮೂರ್ತಿಯವರಂತಹ ಹಿರಿಯ ಪತ್ರಕರ್ತರು ಈ ಬಗ್ಗೆ ಸೂಚನೆ ನೀಡಿದ್ದು ಆತಂಕ ಹೆಚ್ಚಿಸಿ ಬಿಟ್ಟಿತ್ತು. ಅಕಾಸ್ಮಾತ್ ಕೇಳಿದರೆ ಏನು ಬರೆಯಬೇಕು ಎಂದು ಯೋಚಿಸುತ್ತಿದ್ದೆ. ಯಾರ ಜೊತೆಗೂ ಮಾತನಾಡಲು ಮನಸ್ಸಿಲ್ಲ. ಬಾಲ ಸುಟ್ಟ ಬೆಕ್ಕಿನಂತೆ ನನ್ನ ಪರಿಸ್ಥಿತಿಯಾಗಿ ಬಿಟ್ಟಿತ್ತು. ಆ ಮಹಾನ್ ವ್ಯಕ್ತಿಯ ಮುಂದೆ ನನ್ನ ಅಜ್ಞಾನವನ್ನು ಪ್ರದರ್ಶಿಸಿಕೊಳ್ಳುವುದಕ್ಕಿಂತ ಅಲ್ಲಿಂದ ಪುಸ್ತಕ ಬಿಡುಗಡೆಯೂ ಬೇಡ! ಏನೂ ಬೇಡ ಎಂದು ಓಡಿ ಹೋಗಿ ಬಿಡುವುದೇ ಮೇಲು ಎಂದು ಭಾವಿಸಿ ಬಿಟ್ಟಿದ್ದೆ!
ಆದರೆ ಅಲ್ಲಿ ನನ್ನನ್ನು ಬಹಳ ಬುದ್ದಿವಂತ ಎಂದು ತಪ್ಪು ತಿಳಿದುಕೊಂಡ ನನ್ನ ಪತ್ನಿ ಅರ್ಪಿತಾ ಇದ್ದಳು. ಚಂದ್ರಯಾನದ ಪುಸ್ತಕದ ಬಗ್ಗೆ ಮೆಚ್ಚುಗೆಯ ಮಾತನಾಡಿದ್ದ ಹಿರಿಯ ಪತ್ರಕರ್ತರಿದ್ದರು. ಅವರೆಲ್ಲ ನನ್ನ ಬೆನ್ನು ತಟ್ಟಿ, ಈ ಸ್ಮರಣೀಯ ಕ್ಷಣದಲ್ಲಿ ನನ್ನ ಜೊತೆ ಇರಲು ಬಂದವರು. ಈಗ ಓಡಿದರೆ ಛೇ! ಇಷ್ಟೆಲ್ಲಾ ಯೋಚನೆಗಳು ಕ್ಷಣಾರ್ಧದಲ್ಲಿ ತಲೆಯಲ್ಲಿ ಬಂದು ಹೋದವು. ಬಂದದ್ದು ಬರಲಿ. ಈ ಪರೀಕ್ಷೆಯೂ ನಡೆದು ಹೋಗಲಿ! ಇಂತಹ ಮಹಾನ್ ವ್ಯಕ್ತಿಯ ಮುಂದೆ ನನ್ನ ಅಜ್ಞಾನ ಪ್ರದರ್ಶನವಾದರೂ, ಏನೂ ಬರೆಯಲಾಗದೇ ಕೈ ನಡುಗಿ ಅಪಮಾನವಾದರೂ ಅದು ಆಶೀರ್ವಾದವೇ! ಈ ಮಹಾನ್ ವ್ಯಕ್ತಿ ನನ್ನ ಪುಸ್ತಕ ಬಿಡುಗಡೆ ಮಾಡುತ್ತಿರುವುದೇ ಅದೃಷ್ಟ! ಉಳಿದದ್ದು ಏನು ಬೇಕಾದರೂ ಆಗಲಿ ಎಂದು ನನಗೆ ನಾನೇ ಸಮಾಧಾನ ಮಾಡಿಕೊಳ್ಳಲು ಯತ್ನಿಸಿದೆ.
ಯಾರದ್ದೋ ಜೊತೆ ಮೀಟಿಂಗ್ನಲ್ಲಿದ್ದ ಕಲಾಂಜಿ ನಿಗದಿತ ಸಮಯಕ್ಕೆ ಸರಿಯಾಗಿ ಒಳಗೆ ಕರೆದರು. ಎಲ್ಲರೂ ಒಳಗೆ ಹೋದ ಮೇಲೆಯೇ ನಾನು ಒಳ ಹೋದೆ. ಕಲಾಂಜಿಯವರ ಕೈ ಕುಲುಕಿದೆ. ನಂತರ ಕಲಾಂಜಿಯವರ ಜೊತೆ ಕಳೆದ ಸುಮಾರು 15-20 ನಿಮಿಷಗಳು ನನಗೆ ಅವಿಸ್ಮರಣೀಯ! ಆ ಕ್ಷಣಗಳನ್ನು ಈಗಲೂ ಮೆಲುಕು ಹಾಕುತ್ತಿದ್ದೇನೆ. !
ಆದರೆ ನಾನು ಹಾಗೂ ಸಚ್ಚಿದಾನಂದ ಸರ್ ಅಂದುಕೊಂಡಂತೆ ಕಲಾಂಜಿ ನನಗೆ ಬರೆಯುವ ಪರೀಕ್ಷೆ ನೀಡಲಿಲ್ಲ. ಬದಲಿಗೆ ಬೇರೊಂದು ಸಣ್ಣ ಪರೀಕ್ಷೆಗೆ ನನ್ನನ್ನು ಒಡ್ಡಿದ್ದರು !

Published in: on ಜನವರಿ 31, 2009 at 6:34 ಅಪರಾಹ್ನ  Comments (1)  
Tags: , , , ,

ಕಲಾಂ ಕುರಿತ ನೆನಪುಗಳು

kalam5ಕಲಾಂ.
ನಾನು ತುಂಬಾ ಇಷ್ಟ ಪಡುವ, ಪ್ರೀತಿಸುವ ವ್ಯಕ್ತಿ.
2002 ರಲ್ಲಿ ನಾನು ಬಿಜಾಪುರದಲ್ಲಿ ವಿಜಯ ಕರ್ನಾಟಕ ಜಿಲ್ಲಾ ವರದಿಗಾರನಾಗಿ ಕಾರ್ಯ ನಿರ್ವಹಿಸುತ್ತಿದ್ದೆ. ನಾನು, ಉದಯ ವರದಿಗಾರ ಪ್ರಕಾಶ್ ಸಜ್ಜನ್, ಈ ಟಿವಿ ವರದಿಗಾರ ಮಹಾಂತೇಶ್, ಪ್ರಜಾವಾಣಿ ವರದಿಗಾರ ಸುದೇಶ್ ದೊಡ್ಡಪಾಳ್ಯ, ನಾಲ್ಕೂ ಜನರದ್ದು ಸಮಾನ ಮನಸ್ಸು. ನನ್ನ ವಿಜಯ ಕರ್ನಾಟಕದ ಇನ್ನೊಬ್ಬ ವರದಿಗಾರ ಮಿತ್ರ ರಾಜು ಉಸ್ತಾದ ದೇವರಂತ ಮನುಷ್ಯ! ಇವತ್ತಿಗೂ!! ಜಾತಿಯಿಂದ ಮುಸ್ಲಿಂ ಆದರೂ, ಜಾತಿ, ಧರ್ಮ ಎಲ್ಲದನ್ನೂ ಮೀರಿದ ಅಮಾಯಕ ವ್ಯಕ್ತಿತ್ವ ರಾಜು ಉಸ್ತಾದನದ್ದು! ನಾನು ಹಿಂದೂ, ಆತ ಮುಸ್ಲಿಂ ಆಗಿದ್ದರೂ, ಅದನ್ನು ಮೀರಿದ ಬಾಂಧವ್ಯ ಅಲ್ಲಿದ್ದ ಒಂದು ವರ್ಷದಲ್ಲಿ ನಮ್ಮಿಬ್ಬರ ನಡುವೆ ಬೆಳೆದಿತ್ತು. ಈಗಲೂ ಆಗೊಮ್ಮೆ ಈಗೊಮ್ಮೆ ಫೋನ್ ಮಾಡಿದರೆ ‘ಏನ್ ದೋಸ್ತಾ ಹೆಂಗಿದಿ?’ ಎಂದು ಮಾತಿಗಾರಂಭಿಸುತ್ತಾನೆ.
ರಾಜು ಉಸ್ತಾದನ ಜೊತೆಗಿನ ನನ್ನ ಮೊದಲ ವರದಿಗಾರಿಕೆಯ ಅನುಭವ ಇವತ್ತಿಗೂ ನಗೆ ಉಕ್ಕಿಸುತ್ತದೆ. ಅದನ್ನು ಮತ್ತ್ಯಾವತ್ತಾದರೂ ಹೇಳುತ್ತೇನೆ. ಈ ಉಸ್ತಾದ್ ತಾನಾಯಿತು. ತನ್ನ ಕೆಲಸವಾಯಿತು. ಬಲವಂತ ಮಾಡಿದರೆ ಜೊತೆಗೆ ಊಟಕ್ಕೆ ಬರುತ್ತಿದ್ದ. ಫಿಲಂಗೆ ಕರೆದರಂತೂ ಮಾರು ದೂರ! ಇಲ್ಲ ದೋಸ್ತ್! ನೀವು ಹೋಗಿ ಬರ್ರೆಲಾ!’ ಎಂದು ಸಾಗ ಹಾಕುತ್ತಿದ್ದ.
ಆವತ್ತಿಗೆ ನಾವು 5 ಜನರೂ ಎಲಿಜಬಲ್ ಬ್ಯಾಚುಲರ್ಸ್! ಹೀಗಾಗಿ ಸಂಪಾದಕರನ್ನು, ಬ್ಯೂರೋ ಮುಖ್ಯಸ್ಥರನ್ನು ಬಿಟ್ಟರೆ ನಮ್ಮ ಮೇಲೆ ಯಾರ ಹಿಡಿತವೂ ಇರಲಿಲ್ಲ! (ಈಗ ಹೇಗೆ ಎಂದು ಕೇಳಬೇಡಿ). ಬೆಳಿಗ್ಗೆ 9 ರಿಂದ ರಾತ್ರಿ 10-11 ರ ವರೆಗೆ ವರದಿಗಾರಿಕೆಗೆ ತಿರುಗಾಟ, ಸುದ್ದಿಗಾಗಿ ತಡಕಾಟಗಳು ಮಾಮೂಲಾಗಿದ್ದವು. ರಾತ್ರಿ 8.30 ಕ್ಕೆ ಸುದ್ದಿ ಕಳುಹಿಸಿದ ನಂತರ ಊಟ, ಸಿನಿಮಾಗಳಿಗೆ ಬಿಟ್ಟೂ ಬಿಡದೆ ಹೋಗುತ್ತಿದ್ದೆವು. ಸಿನಿಮಾಗಳಿಂದ ರಾಜು ಉಸ್ತಾದ, ಸುದೇಶ್ ಹಾಗೂ ಮಹಾಂತೇಶ್ ಮಾರು ದೂರ! ಆದರೆ ನಾನು ಮತ್ತು ಪ್ರಕಾಶ್ ಒಂದು ವರ್ಷದ ಅವಧಿಯಲ್ಲಿ ಬಿಜಾಪುರಕ್ಕೆ ಬಂದ ಬಹುತೇಕ ಹಿಂದಿ-ಇಂಗ್ಲೀಷ್ ಫಿಲಂ ನೋಡಿದ್ದೆವು. ಒಂದು ರೀತಿ ನನ್ನ ಪತ್ರಿಕೋದ್ಯಮದ ಆರಂಭದ ದಿನಗಳ ಅನುಭವ ಇಂದಿಗೂ ಸ್ವೀಟ್ ಸ್ವೀಟ್!
ಕೆಲವೊಮ್ಮೆ ನನ್ನ ರೂಂಗೆ ಹೋಗಲು ಬೇಸರವಾದಾಗ, ಟಿವಿಯಲ್ಲಿ ಏನಾದರೂ ನ್ಯೂಸ್ ನೋಡಬೇಕು ಎಂದಾಗಲೆಲ್ಲ ಈ ಟಿವಿ ಮಿತ್ರ ಮಹಾಂತೇಶ್ ರೂಂಗೆ ಹೋಗುತ್ತಿದ್ದೆ. ಅತ ನ್ಯೂಸ್ ನೋಡಬೇಕಾಗ್ತದೆ ಎಂದು ಟಿ.ವಿ.ತಂದಿಟ್ಟುಕೊಂಡಿದ್ದ. ಆತನ ರೂಂಗೆ ಹೋದರೆ ಚಂದದ ಟೀ ಮಾಡಿ ಕೊಡುತ್ತಿದ್ದ. ಆ ದಿನವೂ ಬೆಳಿಗ್ಗೆ ಮಹಾಂತೇಶ್ ಎದ್ದು ಚಂದದ್ದೊಂದು ಚಹಾ ಮಾಡಿ, ಪಾರ್ಲೆ ಬಿಸ್ಕತ್ ತಂದಿಟ್ಟಿದ್ದ. ನಾನು ಎದ್ದು ಪೇಪರ್ ಕೈಗೆತ್ತಿಕೊಂಡೆ!
ಆಗ ಮುಂದಿನ ರಾಷ್ಟ್ರಪತಿ ಯಾರು ಎಂಬ ಬಗ್ಗೆ ಎನ್ಡಿಎ ಹಾಗೂ ಕಾಂಗ್ರೆಸ್ ನಡುವೆ ಹಗ್ಗ ಜಗ್ಗಾಟ ನಡೆಯುತ್ತಿತ್ತು. ಆಗ ತಮ್ಮ ಜೀವನದ ಅತಿ ದೊಡ್ಡ ರಾಜಕೀಯ ದಾಳ ಉರುಳಿಸಿದ್ದ ವಾಜಪೇಯಿ ಕಲಾಂ ಅವರ ಹೆಸರನ್ನು ಪ್ರಸ್ತಾಪಿಸಿದ್ದರು. ಅವರು ಮುಂದಿನ ರಾಷ್ಟ್ರಪತಿ ಎಂದು ಘೋಷಣೆ ಮಾಡಿದ ಮರು ದಿನ ಎಲ್ಲಾ ಪೇಪರ್ಗಳಲ್ಲಿ ಅದೇ ಹೆಡ್ಲೈನ್ ! ಅದನ್ನು ಓದುತ್ತಲೇ ‘ಮಾಂತೂ, ವಾಜಪೇಯಿ ಕಾಂಗ್ರೆಸ್ಗೆ ಸಖತ್ ಟಾಂಗು ಕೊಟ್ಟ ಹಾಗಿದೆ! ಇನ್ನು ಕಾಂಗ್ರೆಸ್ ಕಲಾಂ ಅವರನ್ನು ವಿರೋಧಿಸುವ ಸಾಧ್ಯತೆಗಳೇ ಇಲ್ಲ. ಗುಡ್ ಸೆಲೆಕ್ಷನ್’ ಎಂದಿದ್ದೆ. ಮಹಾಂತೇಶ ಕೂಡಾ ‘ಅಜ್ಜಪ್ಪಂದು (ವಾಜಪೇಯಿ) ತಲೆ ಅಂದ್ರೆ ತಲೆ’ ಎಂದಿದ್ದ. ಆ ದಿನವೇ ಅಲ್ಲಿದ್ದ ನವ ಕರ್ನಾಟಕ ಪುಸ್ತಕದ ಮಳಿಗೆಗೆ ಹೋಗಿ ಕಲಾಂ ಅವರ ‘ವಿಂಗ್ಸ್ ಆಫ್ ಫೈರ್’ ತಂದು ಓದಿದ್ದೆ.
ಮದ್ಯಾಹ್ನದ ಹೊತ್ತಿಗೆ ಕಾಂಗ್ರೆಸ್ ವಾಜಪೇಯಿ ದಾಳಕ್ಕೆ ಶರಣಾಗಿತ್ತು. ಕಲಾಂರನ್ನು ಬೆಂಬಲಿಸಿತ್ತು. ಏನೇ ರಾಜಕೀಯವಿರಲಿ! ವಾಜಪೇಯಿ ನೇತೃತ್ವದ ಎನ್ಡಿಎ ತೆಗೆದುಕೊಂಡ ಅತ್ಯಂತ ಉತ್ತಮ ನಿರ್ಧಾರ ಕಲಾಂ ಅವರನ್ನು ರಾಷ್ಟ್ರಪತಿಯನ್ನಾಗಿ ಮಾಡಿದ್ದು! ಈ ದೇಶಕ್ಕೆ ಬಿಜೆಪಿ ನೀಡಿದ ಬಹುದೊಡ್ಡ ಕೊಡುಗೆಗಳಲ್ಲಿ ಒಂದು ಕಲಾಂರನ್ನು ರಾಷ್ಟ್ರಪತಿಯಾಗಿಸಿದ್ದು! ಹಾಗೂ ಕಾಂಗ್ರೆಸ್ ನೀಡಿದ ಕೊಡುಗೆ ಯಾವುದೇ ವಿರೋಧವಿಲ್ಲದೆ ಕಲಾಂ ಆಯ್ಕೆ ಬೆಂಬಲಿಸಿದ್ದು!! ಈ ಆಯ್ಕೆಯ ಪರಿಣಾಮ, ಯುವ ಮನಸ್ಸುಗಳ ಮೇಲೆ ಅವರು ಮಾಡಿದ ಮ್ಯಾಜಿಕ್ ಪರಿಣಾಮ ನಮಗೆ ಕಂಡು ಬರಲು ಇನ್ನು ಕೆಲ ವರ್ಷ ಕಾಯಬೇಕು!
ರಾಷ್ಟ್ರಪತಿಗಳಾದ ನಂತರ 5 ವರ್ಷ ಕಲಾಂ ಜಾದು ಮಾಡಿದ ಮೋಡಿ ಅಂತಿದ್ದಲ್ಲ. ರಾಜಕೀಯ ನಾಯಕರ ಗೋಸುಂಬೆತನ ನೋಡಿ ರೋಸಿದ್ದ ಜನರಿಗೆ ಆಶಾಕಿರಣವಾಗಿ ಕಲಾಂ ಗೋಚರಿಸಿದ್ದರು. ಅವರ ನಿಷ್ಕಲ್ಮಷ ಹೃದಯ ಬಹುದೊಡ್ಡ ಮ್ಯಾಜಿಕ್ ಮಾಡಿತ್ತು. ರಾಷ್ಟ್ರಪತಿ ಸ್ಥಾನಕ್ಕೆ ಬಹುದೊಡ್ಡ ಗೌರವ ತಂದು ಕೊಟ್ಟರು.
ಅಂಥ ಕಲಾಂರನ್ನು ಮೆಚ್ಚದವರು, ಪ್ರೀತಿಸದವರಾರು?? ಅವರು ನನಗೆ ರಾಷ್ಟ್ರಪತಿ, ಮಾಜಿ ರಾಷ್ಟ್ರಪತಿ ಎಂಬುದಕ್ಕಿಂತ ಹೆಚ್ಚಾಗಿ ಬೈಯದೆಯೇ ಬುದ್ದಿ ಹೇಳುವ ತಾತನಂತೆ ಕಂಡದ್ದೇ ಹೆಚ್ಚು!
ಅವರನ್ನು ನೋಡಬೇಕು, ಮಾತನಾಡಿಸಬೇಕು ಎಂಬ ಆಸೆ ಈಡೇರಿದ್ದು ದೆಹಲಿಗೆ ಬಂದ ನಂತರ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ದೆಹಲಿಗೆ ಬಂದಾಗ ಕಲಾಂರನ್ನು ಭೆಟಿ ಮಾಡಿಲು ಹೋಗಿದ್ದರು. ಟಿವಿ ವರದಿಗಾರರೂ ಹೋಗಿದ್ದೆವು. ಆಗ ಕಲಾಂರನ್ನು ಭೇಟಿ ಮಾಡಿದಾಗ ಯಡಿಯೂರಪ್ಪ ಪತ್ರಕರ್ತರನ್ನೂ ಪರಿಚಯ ಮಾಡಿಕೊಟ್ಟಿದ್ದರು. ನಾನು ಟಿವಿ9 ಪ್ರತಿನಿಧಿ ಎಂದು ಪರಿಚಯ ಮಾಡಿಕೊಂಡಾಗ ‘ಓ! ಯೂ ಆರ್ ಎ ಟಿವಿ ಜರ್ನಲಿಸ್ಟ್! ಯೂ ಹ್ಯಾವ್ ಟು ಪ್ಲೇ ಮೋಸ್ಟ್ ಆಕ್ಟೀವ್ ರೋಲ್ ಇನ್ ದಿ ಡೆವಲಪ್ಮೆಂಟ್ ಆಫ್ ದಿ ಕಂಟ್ರಿ. ನೈಸ್’ ಎಂದರು. ಹೆಗಲ ಮೇಲೆ ಕೈ ಹಾಕಿ ನಿಮ್ಮ ಹೆಸರೇನು ಎಂದು ಮತ್ತೆ ಕೇಳಿದರು. ಫೊಟೋ ಬೇಕು ಎಂದಾಗ ನಮ್ಮ ಜೊತೆ ನಿಂತು ಫೋಸ್ ಕೊಟ್ಟರು. ಬಹು ದಿನದ ಆಸೆ ಈಡೇರಿತ್ತು.
ನಂತರ ಚಂದ್ರಯಾನ ಪುಸ್ತಕ ಬರೆದಾಗ ಅದನ್ನು ಕಲಾಂ ಅವರಿಗೇ ಅರ್ಪಿಸಿದೆ. ಕಲಾಂ ಅವರ ಕೈಯಿಂದಲೇ ಬಿಡುಗಡೆ ಮಾಡಿಸಿದರೆ ಸೂಕ್ತ ಎಂದುಕೊಂಡೆ. ಸಾಮಾನ್ಯವಾಗಿ ಅವರು ಪುಸ್ತಕ ಬಿಡುಗಡೆ ಮಾಡುವುದಿಲ್ಲ. ಆದರೆ ಚಂದ್ರಯಾನ ಕುರಿತ ಪುಸ್ತಕ ಎಂದಾಗ ಒಪ್ಪಿದರು. ಅಂದುಕೊಂಡಂತೆ ಕಲಾಂಜಿ ಪುಸ್ತಕ ಬಿಡುಗಡೆ ಮಾಡಿದರು.
ಮನಸ್ಸಿನಲ್ಲಿ ಏನೋ ಒಂದು ದೊಡ್ಡ ಸಮಾಧಾನ. ಅದನ್ನೇ ನಿಮ್ಮ ಹತ್ತಿರ ಹಂಚಿಕೊಂಡಿದ್ದೇನೆ.

ಗಮನಕ್ಕೆ: ಕಲಾಂ ಅವರ ಪುಸ್ತಕ ಬಿಡುಗಡೆ, ಅವರೊಂದಿಗಿನ ಕ್ಷಣಗಳ ಹೆಚ್ಚಿನ ಫೊಟೋ, ಸುದ್ದಿ, ಇನ್ನೆರಡು ದಿನದಲ್ಲಿ ಇಲ್ಲಿರುತ್ತದೆ. ಪ್ರಾಮಿಸ್.

Published in: on ಜನವರಿ 29, 2009 at 3:07 ಫೂರ್ವಾಹ್ನ  Comments (2)  
Tags: , , , ,